ADVERTISEMENT

ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದವರ ಬಂಧನ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2021, 16:28 IST
Last Updated 9 ಅಕ್ಟೋಬರ್ 2021, 16:28 IST

ಬೆಂಗಳೂರು: ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ಮಾರುತ್ತಿದ್ದ ಇಬ್ಬರು ಆರೋಪಿಗಳನ್ನು ಎಚ್‌.ಎಸ್‌.ಆರ್ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಕೇರಳದ ರಾಹಿತ್ (29) ಹಾಗೂ ಮಣಿ‍ಪುರದ ಮಮಯಾಂಗ್ (32) ಬಂಧಿತರು. ಅವರಿಂದ ₹ 10 ಲಕ್ಷ ಮೌಲ್ಯದ ಮಾದಕ ವಸ್ತುವನ್ನು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು

‘ಕೆಲಸ ಹುಡುಕಿಕೊಂಡು ಆರೋಪಿಗಳು ನಗರಕ್ಕೆ ಬಂದಿದ್ದರು. ಕೆಲಸದ ಸ್ಥಳದಲ್ಲಿ ಪರಸ್ಪರ ಪರಿಚಯವಾಗಿದ್ದರು. ದುಡಿದ ಹಣ ಖರ್ಚಿಗೆ ಸಾಲುತ್ತಿರಲಿಲ್ಲ. ಅಕ್ರಮವಾಗಿ ಹಣ ಸಂಪಾದಿಸಲು ಆರೋಪಿಗಳು, ಡ್ರಗ್ಸ್ ಮಾರಾಟಕ್ಕೆ ಇಳಿದಿದ್ದರು’ ಎಂದೂ ತಿಳಿಸಿದರು.

ADVERTISEMENT

‘ಆರೋಪಿಗಳ ಕೃತ್ಯದ ಬಗ್ಗೆ ಮಾಹಿತಿ ಬಂದಿತ್ತು. ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಯಿತು. 3 ಕೆ.ಜಿ 750 ಗ್ರಾಂ ತೂಕದ ಗಾಂಜಾ, 300 ಎಂಡಿಎಂಎ ಮಾತ್ರೆಗಳು ಹಾಗೂ ಹೆರಾಯಿನ್ ಪತ್ತೆಯಾಯಿತು’ ಎಂದೂ ಮಾಹಿತಿ ನೀಡಿದರು.

‘ಕೆಲ ಕಾಲೇಜು ವಿದ್ಯಾರ್ಥಿಗಳೇ ಆರೋಪಿಗಳ ಬಳಿ ಹೆಚ್ಚಾಗಿ ಡ್ರಗ್ಸ್ ಖರೀದಿಸುತ್ತಿದ್ದರು. ಕಾಲೇಜು ಬಳಿಯೂ ಹೋಗಿ ಆರೋಪಿಗಳು ಡ್ರಗ್ಸ್ ಮಾರಿ ಬರುತ್ತಿದ್ದರೆಂಬ ಮಾಹಿತಿ ತನಿಖೆಯಿಂದ ಗೊತ್ತಾಗಿದೆ’ ಎಂದೂ ಪೊಲೀಸರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.