ADVERTISEMENT

2 ವಾರದಲ್ಲಿ ಹುಳಿಮಾವು ಕೆರೆ ಸಮೀಕ್ಷೆಗೆ ಸೂಚನೆ

ಕೆರೆ ಒಡೆದ ನಂತರದ ಪರಿಸ್ಥಿತಿಯ ವಿಚಾರಣೆ ನಡೆಸಿದ ಲೋಕಾಯುಕ್ತ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2019, 20:30 IST
Last Updated 10 ಡಿಸೆಂಬರ್ 2019, 20:30 IST
   

ಬೆಂಗಳೂರು: ಇತ್ತೀಚೆಗೆ ಒಡೆದ ಹುಳಿಮಾವು ಕೆರೆಯ ಸರ್ವೆ ಕೈಗೊಂಡು, ಎರಡು ವಾರದಲ್ಲಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಮಂಗಳವಾರ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕೆರೆ ಒಡೆದು, ಸ್ಥಳೀಯ ನಾಗರಿಕರಿಗೆ ತೊಂದರೆ ಉಂಟುಮಾಡಿದ ಪ್ರಕರಣ ಕುರಿತು ವಿಚಾರಣೆ ನಡೆಸಿದ ಲೋಕಾಯುಕ್ತರು, ಇದುವರೆಗೆ ನೀಡಿರುವ ಪರಿಹಾರ ಹಾಗೂ ಕೆರೆ ಸಂರಕ್ಷಣೆಗೆ ಕೈಗೊಂಡ ಕ್ರಮದ ಬಗ್ಗೆ ಮಾಹಿತಿ ಪಡೆದರು.

ಹುಳಿಮಾವು ಸರ್ವೆ ನಂಬರ್‌ 42 ಹಾಗೂ ಕಮ್ಮನಹಳ್ಳಿ ಸರ್ವೆ ನಂಬರ್‌ 110ರ ಪ್ರದೇಶವನ್ನು ಎರಡು ವಾರದೊಳಗೆ ಸರ್ವೆ ಮಾಡಬೇಕು. ತಡೆಗೋಡೆ ನಿರ್ಮಿಸಿ ಕೆರೆ ಸಂರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಆದೇಶಿಸಿದರು.

ADVERTISEMENT

ಕೆರೆ ಪ್ರದೇಶ ಒತ್ತುವರಿಯನ್ನು ಎಂಟು ವಾರದೊಳಗೆ ತೆರವು ಮಾಡುವಂತೆ ತಹಶೀಲ್ದಾರ್‌ಗೆ ಸೂಚಿಸಿದ್ದಾರೆ. ಮುಂದಿನ ತಿಂಗಳ 10ರೊಳಗೆ ಪರಿಹಾರ ಕ್ರಮ ಕುರಿತಾದ ಸಂಪೂರ್ಣ ವರದಿ ಸಲ್ಲಿಸುವಂತೆಯೂ ಲೋಕಾಯುಕ್ತರು ತಾಕೀತು ಮಾಡಿದ್ದಾರೆ.

ಬಿಡಿಎ 17.33 ಎಕರೆ ಕೆರೆ ಜಮೀನು ಒತ್ತುವರಿ ಮಾಡಿದ್ದು, ಈ ಪ್ರದೇಶದಲ್ಲಿ ಬಡಾವಣೆ ಮತ್ತು ರಸ್ತೆ ನಿರ್ಮಿಸಲಾಗಿದೆ. ಶಾಲೆ ಮತ್ತಿತರ ಉದ್ದೇಶಗಳಿಗೆ ಸರ್ಕಾರದಿಂದ ಒತ್ತುವರಿಯಾಗಿದೆ. 30 ಗುಂಟೆ ಖಾಸಗಿಯವರು ಅತಿಕ್ರಮಿಸಿ
ದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ನಗರದ ಕೆರೆಗಳ ಸಂರಕ್ಷಣೆ ಉದ್ದೇಶದಿಂದ, ನಮ್ಮ ಬೆಂಗಳೂರು ಪ್ರತಿಷ್ಠಾನವು ಲೋಕಾಯುಕ್ತ ಸಂಸ್ಥೆಗೆ ದೂರು ನೀಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಾಯುಕ್ತ ನ್ಯಾ.ಪಿ.ವಿಶ್ವನಾಥ ಶೆಟ್ಟಿ ವಿಚಾರಣೆ ನಡೆಸುತ್ತಿದ್ದಾರೆ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿ ವಿಚಾರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.