ADVERTISEMENT

ನಾನು ಭಾರತೀಯ ಬರಹಗಾರ: ಎಸ್‌.ಎಲ್‌. ಭೈರಪ್ಪ

ಸಂವಾದ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 16:09 IST
Last Updated 1 ಅಕ್ಟೋಬರ್ 2023, 16:09 IST
‘ಪರ್ವ’ ಸಂವಾದ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಮತ್ತು ನಿರ್ದೇಶಕ ಪ್ರಕಾಶ್‌ ಬೆಳವಾಡಿ ಮಾತುಕತೆಯಲ್ಲಿ ತೊಡಗಿರುವುದು . ಪ್ರಜಾವಾಣಿ ಚಿತ್ರ
‘ಪರ್ವ’ ಸಂವಾದ ಕಾರ್ಯಕ್ರಮದಲ್ಲಿ ಕಾದಂಬರಿಕಾರ ಎಸ್‌.ಎಲ್. ಭೈರಪ್ಪ ಮತ್ತು ನಿರ್ದೇಶಕ ಪ್ರಕಾಶ್‌ ಬೆಳವಾಡಿ ಮಾತುಕತೆಯಲ್ಲಿ ತೊಡಗಿರುವುದು . ಪ್ರಜಾವಾಣಿ ಚಿತ್ರ    

ಬೆಂಗಳೂರು: ‘ನಾನು ಮೊದಲು ಭಾರತೀಯ. ಭಾರತದ ಅಂಗವಾಗಿ ಕನ್ನಡಿಗ. ದೇಶಕ್ಕೆ ಮೊದಲು ನನ್ನ ಪ್ರೀತಿ. ನಾನು ಭಾರತೀಯ ಬರಹಗಾರ’ ಎಂದು ಕಾದಂಬರಿಕಾರ ಎಸ್‌.ಎಲ್‌. ಭೈರಪ್ಪ ಹೇಳಿದರು.

‘ಪರ್ವ’ ಕಾದಂಬರಿ ಇಂಗ್ಲಿಷ್‌ ನಾಟಕವಾಗುತ್ತಿರುವ ಕಾರಣ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನನ್ನ ಪ್ರತಿ ಕಾದಂಬರಿಯಲ್ಲಿರುವುದು ನನ್ನ ಹಳ್ಳಿ ಮಾತ್ರವಲ್ಲ, ದೇಶದ ಯಾವುದೇ ಹಳ್ಳಿಯ ಕಥೆಯಾಗಿರುತ್ತದೆ. ನಮ್ಮ ಅನುಭವ ಹಿಗ್ಗಿಸಿಕೊಂಡಾಗ, ವಿಸ್ತರಿಸಿಕೊಂಡಾಗ ಮಾತ್ರ ಬರವಣಿಗೆಯೂ ವಿಸ್ತಾರವಾಗಲು ಸಾಧ್ಯ’ ಎಂದರು.

ADVERTISEMENT

‘ಕಾದಂಬರಿಯಲ್ಲಿ ನಾಟಕದ ಗುಣ ಇರಬೇಕು. ಆಗಲೇ ಅದು ಪರಿಪೂರ್ಣವಾಗುತ್ತದೆ. ನಾನು ಬಾಲ್ಯದಿಂದಲೇ ನಾಟಕ ನೋಡಿದ, ಓದಿದ ಕಾರಣದಿಂದ ನನ್ನ ಪರ್ವ ಕಾದಂಬರಿಯಲ್ಲಿ ನಾಟಕದ ಬಿಗಿ ಇರಲು ಸಾಧ್ಯವಾಯಿತು’ ಎಂದು ವಿವರಿಸಿದರು.

‘ಪರ್ವ ಬರೆಯುವಾಗ ಒಂದು ಅಂಕಿ ಅಂಶದ ಪಟ್ಟಿ ಮಾಡಿಕೊಂಡಿದ್ದೆ. ಮಹಾಭಾರತದಲ್ಲಿ ಅತಿ ಹಿರಿಯ ಅಂದರೆ ಭೀಷ್ಮ. ಅವರಿಗೆ 120 ವರ್ಷ. ಅತಿ ಕಿರಿಯ ಎಂದರೆ 16 ವರ್ಷದ ಅಭಿಮನ್ಯು. ಈ ಇಬ್ಬರ ನಡುವೆ ಬರುವ ಉಳಿದ ಪಾತ್ರಗಳಿಗೆ ಎಷ್ಟೆಷ್ಟು ವಯಸ್ಸು ಇರಬಹುದು ಎಂದು ಗುರುತು ಮಾಡಿಕೊಂಡಿದ್ದೆ. ಇದರಿಂದ ಕಾದಂಬರಿಯ ಸನ್ನಿವೇಶಗಳನ್ನು ಬರೆಯಲು ಸುಲಭವಾಯಿತು’ ಎಂದು ನೆನಪು ಮಾಡಿಕೊಂಡರು.

‘ಪರ್ವ ಕಾದಂಬರಿ ಕನ್ನಡದಲ್ಲಿ 600 ಪುಟ ಇದೆ. ಇಂಗ್ಲಿಷ್‌ ಅನುವಾದದಲ್ಲಿ 950 ಪುಟಗಳಾಗಿವೆ. ಏಕೆಂದರೆ ಕನ್ನಡದಲ್ಲಿ ಒಂದು ವಾಕ್ಯದಲ್ಲಿ ಕಟ್ಟಿಕೊಡಬಲ್ಲ ಒಂದು ವಿಚಾರವನ್ನು ಇಂಗ್ಲಿಷ್‌ನಲ್ಲಿ ಸ್ವಲ್ಪ ವಿವರಿಸಬೇಕಾಗುತ್ತದೆ. ಇಲ್ಲದಿದ್ದರೆ ಪರಿಣಾಮ ಉಂಟಾಗುವುದಿಲ್ಲ. ಅದಕ್ಕೆ ಇಂಗ್ಲಿಷ್‌ ಅನುವಾದದ ಪುಟಗಳು ಹೆಚ್ಚಾಗಿವೆ. ಆದರೆ, ಕನ್ನಡ ಮತ್ತು ಇಂಗ್ಲಿಷ್‌ ಎರಡೂ ಭಾಷೆಗಳಲ್ಲೂ ನಾಟಕ ಪ್ರದರ್ಶನದ ಅವಧಿ 8 ಗಂಟೆಗಳು ಎಂಬುದಾಗಿ ಪ್ರಕಾಶ್‌ ಬೆಳವಾಡಿ ಭರವಸೆ ನೀಡಿದ್ದಾರೆ’ ಎಂದು ಭೈರಪ್ಪ ಹೇಳಿದರು.

ಕಾದಂಬರಿಕಾರರಾದ ಸಹನಾ ವಿಜಯಕುಮಾರ್‌ ಅವರು ಪರ್ವ ಕಾದಂಬರಿಯ ಅವಲೋಕನ ಮತ್ತು ಭೈರಪ್ಪ, ಪ್ರಕಾಶ್‌ ಬೆಳವಾಡಿಯವರೊಂದಿಗೆ ಸಂವಾದ ನಡೆಸಿದರು. ಸಂಗೀತ ಅಕಾಡೆಮಿ ಅಧ್ಯಕ್ಷ ಸುಬ್ಬರಾಜ್‌ ಅರಸು ಇದ್ದರು.

‘ವ್ಯಾಸರು ಕ್ಷೇತ್ರ ಭೇಟಿ ಮಾಡಿಲ್ಲ’

‘ಮಹಾಭಾರತವನ್ನು ಬರೆದಿರುವ ವ್ಯಾಸರು ಎಲ್ಲವನ್ನು ವಿವರಿಸುತ್ತಾರೆ. ಆದರೆ ಕ್ಷೇತ್ರ ಅಧ್ಯಯನ ಮಾಡಿ ಬರೆದಿಲ್ಲ. ವಿರಾಟನಗರದ ಬಗ್ಗೆ ಇರುವ ವಿವರಗಳನ್ನು ನೋಡಿದರೆ ಇದು ಅರ್ಥವಾಗುತ್ತದೆ. ಜೈಪುರ ತಾಲ್ಲೂಕಿನಲ್ಲಿ ಬರುವ ವಿರಾಟನಗರಕ್ಕೆ ನಾನು ಭೇಟಿ ನೀಡಿದಾಗ ಅದು ಗುಡ್ಡಗಾಡು ಪ್ರದೇಶ ಎಂಬುದು ಗೊತ್ತಾಯಿತು. ಗುಡ್ಡ–ತಗ್ಗು ಇರುವಲ್ಲಿ ಹೇಗೆ ರಥ ಹೋಗಲು ಸಾಧ್ಯ’ ಎಂದು ಎಸ್‌.ಎಲ್‌. ಭೈರಪ್ಪ ಪ್ರಶ್ನಿಸಿದರು. ‘ಕನ್ನಡದಲ್ಲಿ ಕುಮಾರಭಾರತ ತಂದ ಕುಮಾರವ್ಯಾಸರು ಕೂಡ ಕ್ಷೇತ್ರ ಅಧ್ಯಯನ ಮಾಡಿಲ್ಲ. ನಾನು ಕ್ಷೇತ್ರ ಅಧ್ಯಯನ ಮಾಡಿದಾಗ ಇದೆಲ್ಲ ಗೊತ್ತಾಯಿತು’ ಎಂದು ತಿಳಿಸಿದರು.

’ಜೀವನದ ದೊಡ್ಡ ಸಾಧನೆ’

‘ಪರ್ವ ನಾಟಕ ಮಾಡಿರುವುದು ನನ್ನ ಜೀವನದ ದೊಡ್ಡ ಸಾಧನೆ’ ಎಂದು ‘ಪರ್ವ’ ಕನ್ನಡ ಮತ್ತು ಇಂಗ್ಲಿಷ್‌ ನಾಟಕಗಳ ನಿರ್ದೇಶಕ ಪ್ರಕಾಶ್‌ ಬೆಳವಾಡಿ ಹೇಳಿದರು. ‘ಇಷ್ಟು ವರ್ಷ ಜೀವನವನ್ನು ವ್ಯರ್ಥ ಮಾಡಿದ್ದಿ. ಈಗ ಒಳ್ಳೆಯ ಕೆಲಸ ಮಾಡಿದ್ದಿ ಎಂದು ನನ್ನ ಪತ್ನಿ ಕೂಡ ಹೇಳಿದರು. ಅದನ್ನು ನಾನು ನಂಬುತ್ತೀನಿ. ಈಗ ಬುದ್ಧಿ ಬಂದಿದೆ’ ಎಂದು ಹೇಳಿದರು.

ಉಚಿತವಾಗಿ ನಾನು ನೋಡಿಲ್ಲ: ಭೈರಪ್ಪ ‘ಪರ್ವ – ಕನ್ನಡ ನಾಟಕ ಪ್ರದರ್ಶನಕ್ಕೆ ಟಿಕೆಟ್‌ ದರ ₹ 500. ಹಣ ನೀಡಿ ಟಿಕೆಟ್‌ ಖರೀದಿಸಿದ ಮೊದಲಿಗ ನಾನು. ಇಂಗ್ಲಿಷ್‌ ನಾಟಕಕಕ್ಕೆ ಟಿಕೆಟ್‌ ದರ ₹ 3500 ಇಟ್ಟಿದ್ದಾರೆ. ಈ ನಾಟಕವನ್ನೂ ಹಣ ಕೊಟ್ಟೇ ನೋಡುತ್ತೇನೆ’ ಎಂದು ಎಸ್‌.ಎಲ್‌. ಭೈರಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.