
ಬೆಂಗಳೂರು: ‘ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು (ಐಬಿಪಿಎಸ್) ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಿಬ್ಬಂದಿ ನೇಮಕಾತಿಯಲ್ಲಿ ಸ್ಥಳೀಯ ಭಾಷಿಗರಿಗೆ ಆದ್ಯತೆ ನೀಡಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಆಗ್ರಹಿಸಿದ್ದಾರೆ.
ಈ ಬಗ್ಗೆ ಅವರು ಐಬಿಪಿಎಸ್ ಸಂಸ್ಥೆಯ ಅಧ್ಯಕ್ಷ ರಜನೀಶ್ ಕರ್ನಾಟಕ್ ಅವರಿಗೆ ಪತ್ರ ಬರೆದಿದ್ದಾರೆ. ಈ ನೇಮಕಾತಿಗೆ ಸಂಬಂಧಿಸಿದಂತೆ ನ.25ರಂದು ಪರೀಕ್ಷೆ ಹಮ್ಮಿಕೊಳ್ಳಲಾಗಿದೆ.
‘ಇತ್ತೀಚೆಗೆ ಗ್ರಾಮೀಣ ಬ್ಯಾಂಕ್‌ಗಳಲ್ಲಿ ಪ್ರಾದೇಶಿಕ ಭಾಷೆ ಬಲ್ಲದ ಅಭ್ಯರ್ಥಿಗಳ ನೇಮಕಾತಿ ಹೆಚ್ಚಾಗುತ್ತಿದೆ. ಇದು ಇಡೀ ಗ್ರಾಮೀಣ ಬ್ಯಾಂಕ್‌ಗಳ ಅಸ್ತಿತ್ವದ ಪರಿಕಲ್ಪನೆಯನ್ನೇ ಬುಡಮೇಲು ಮಾಡಿದೆ. ಇಂತಹ ಬ್ಯಾಂಕ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸ್ಥಳೀಯ ಸಂಸ್ಕೃತಿ ಹಾಗೂ ಅಲ್ಲಿನ ಪರಿಸ್ಥಿತಿಗಳನ್ನು ಅರಿತಿರುವುದು ಅತ್ಯವಶ್ಯಕ. ಆಗ ಗ್ರಾಮೀಣ ಬ್ಯಾಂಕ್‌ಗಳ ದಕ್ಷತೆ ಹೆಚ್ಚುವ ಜತೆಗೆ ಅವುಗಳ ಅಸ್ತಿತ್ವವೂ ಅರ್ಥಪೂರ್ಣವಾಗುತ್ತದೆ’ ಎಂದು ಹೇಳಿದ್ದಾರೆ.
ರಾಜ್ಯೋತ್ಸವ ಆಚರಣೆಗೆ ಅವಕಾಶ
ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ ಸಂಸ್ಥೆಯು (ಬಿ.ಎಚ್.ಇ.ಎಲ್) ತನ್ನ ನಿಲುವು ಬದಲಿಸಿ ಕರ್ನಾಟಕ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಿದೆ. ಸಂಸ್ಥೆಯ ಈ ನಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಸ್ವಾಗತಿಸಿದ್ದಾರೆ.
‘ಪ್ರಾಧಿಕಾರದ ಕಠಿಣ ಆಗ್ರಹಕ್ಕೆ ಸ್ಪಂದಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳು ತಮ್ಮೆಲ್ಲಾ ಸಹೋದ್ಯೋಗಿಗಳು ಹಾಗೂ ಸಂಘ-ಸಂಸ್ಥೆಗಳನ್ನು ರಾಜ್ಯೋತ್ಸವ ಆಚರಣೆಗೆ ಆಹ್ವಾನಿಸಿರುವುದು ಅಭಿನಂದನಾರ್ಹ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಯಾವುದೇ ಸಂಸ್ಥೆ ಕನ್ನಡಕ್ಕೆ ಸಲ್ಲಬೇಕಾದ ಸ್ಥಾನಮಾನವನ್ನು ಒದಗಿಸುವುದು ಅದರ ಕರ್ತವ್ಯ’ ಎಂದು ಪುರುಷೋತ್ತಮ ಬಿಳಿಮಲೆ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.