ADVERTISEMENT

ಮಳೆ ಬಿದ್ದರೆ ಹೊಳೆಯಂತಾಗುವ ಮಾಗಡಿ ರಸ್ತೆ!

ಸುಮಾರು 4 ಕಿ.ಮೀ ವರೆಗೂ ಹಾಳಾಗಿರುವ ರಸ್ತೆ l ಎಚ್ಚೆತ್ತುಕೊಳ್ಳದ ಅಧಿಕಾರಿಗಳು

ಜಿ.ಶಿವಕುಮಾರ
Published 18 ಅಕ್ಟೋಬರ್ 2021, 19:02 IST
Last Updated 18 ಅಕ್ಟೋಬರ್ 2021, 19:02 IST
ಸುಂಕದಕಟ್ಟೆ ಮೂಲಕ ಹಾದುಹೋಗುವ ಮಾಗಡಿ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದು-            ಪ್ರಜಾವಾಣಿ ಚಿತ್ರಗಳು/ ಅನೂಪ್ ರಾಘ ಟಿ.
ಸುಂಕದಕಟ್ಟೆ ಮೂಲಕ ಹಾದುಹೋಗುವ ಮಾಗಡಿ ಮುಖ್ಯ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿರುವುದು- ಪ್ರಜಾವಾಣಿ ಚಿತ್ರಗಳು/ ಅನೂಪ್ ರಾಘ ಟಿ.   

ಬೆಂಗಳೂರು: ಕಣ್ಣು ಹಾಯಿಸಿದಲ್ಲೆಲ್ಲಾ ಕಿತ್ತುಹೋಗಿರುವ ರಸ್ತೆ... ಹರಡಿರುವ ಜಲ್ಲಿಕಲ್ಲುಗಳು... ವಾಹನಗಳು ಸಾಗುವಾಗ ಪಾದಚಾರಿಗಳ ಮುಖಕ್ಕೆ ರಾಚುವ ದೂಳು. ರಸ್ತೆಯ ಮೇಲೇ ಹರಿಯುತ್ತಿರುವ ಚರಂಡಿ ನೀರು....

ಇದ್ಯಾವುದೋ ಕುಗ್ರಾಮದ ಚಿತ್ರಣವಲ್ಲ. ಸುಂಕದಕಟ್ಟೆ ಮೂಲಕ ಹಾದು ಹೋಗುವ ಮಾಗಡಿ ಮುಖ್ಯರಸ್ತೆಯ ದುಸ್ಥಿತಿ ಇದು. ಹಳ್ಳದಂತಾಗಿರುವ ಈ ರಸ್ತೆಯಲ್ಲಿ ಜೀವ ಬಿಗಿ ಹಿಡಿದೇ ಸಾಗಬೇಕು. ಅಲ್ಪ ಮೈಮರೆತರೂ ಅಪಾಯ ಕಟ್ಟಿಟ್ಟ ಬುತ್ತಿ.

ಉದ್ಯಾನನಗರಿಯಿಂದ ಮಾಗಡಿ ತಾಲ್ಲೂಕಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಾಳಾಗಿ ತಿಂಗಳುಗಳೇ ಉರುಳಿವೆ. ಮಳೆ ಬಂದಾಗಲೆಲ್ಲ ಇದು ಹಳ್ಳವಾಗಿ ಮಾರ್ಪಾಡಾಗುತ್ತದೆ. ವಾಹನ ಸವಾರರು ಗುಂಡಿಗೆ ಬಿದ್ದು ಗಾಯ ಮಾಡಿಕೊಂಡ ನಿದರ್ಶನಗಳೂ ಸಾಕಷ್ಟಿವೆ. ಹೀಗಿದ್ದರೂ ರಸ್ತೆಯನ್ನು ದುರಸ್ತಿಪಡಿಸುವ ಕೆಲಸ ಆಗಿಲ್ಲ.

ADVERTISEMENT

ಈ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡುವಂತೆಸ್ಥಳೀಯರು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಿದ್ದರೂ ಸಮಸ್ಯೆ ಬಗೆಹರಿದಿಲ್ಲ. ರಾಜರಾಜೇಶ್ವರಿನಗರ ಕ್ಷೇತ್ರದ ಶಾಸಕ ಹಾಗೂ ಸಚಿವ ಮುನಿರತ್ನ ಅವರೂ ಇತ್ತ ತಿರುಗಿ ನೋಡಿಲ್ಲ. ಶಾಸಕರು ಹಾಗೂ ಅಧಿಕಾರಿಗಳ ಅಸಡ್ಡೆ
ಯಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ.

‘ಮಳೆ ಸುರಿದರೆ ಗುಂಡಿಗಳಲ್ಲೆಲ್ಲಾ ನೀರು ಸಂಗ್ರಹವಾಗುತ್ತದೆ. ರಾತ್ರಿ ವೇಳೆ ಈ ಮಾರ್ಗದಲ್ಲಿ ಸಾಗುವುದೇ ಸವಾಲಾಗಿದೆ. ದ್ವಿಚಕ್ರ ವಾಹನ ಸವಾರರು ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದು ಗಾಯಗೊಳ್ಳುವುದು ಸಾಮಾನ್ಯವಾಗಿಬಿಟ್ಟಿದೆ. ಗುಂಡಿಗಳನ್ನು ಮುಚ್ಚುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಆರು ತಿಂಗಳಿಂದ ಮನವಿ ಮಾಡುತ್ತಲೇ ಇದ್ದೇವೆ. ಹೀಗಿದ್ದರೂ ಗೋಳು ತಪ್ಪಿಲ್ಲ’ ಎಂದು ಸೈಕಲ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನಾಗರಾಜ್‌ ಕಿಡಿಕಾರಿದರು.

‘ಅವ್ಯವಸ್ಥೆ ಖಂಡಿಸಿ ಅನೇಕ ಬಾರಿ ಪ್ರತಿಭಟನೆ ನಡೆಸಿದ್ದೇವೆ. ಪ್ರತಿಭಟನೆಯ ಮಾರನೇ ದಿನ ಒಂದಷ್ಟು ಜಲ್ಲಿಕಲ್ಲು ಹಾಗೂ ಮಣ್ಣು ಸುರಿದು ಹೋಗುತ್ತಾರೆ. ಮಳೆ ಬಂದರೆ ಅದೇ ದಿನ ರಾತ್ರಿಯೇ ಅವು ಕೊಚ್ಚಿಕೊಂಡು ಹೋಗುತ್ತವೆ. ಡಾಂಬರು ಹಾಕಿ ಮುಚ್ಚುವಂತೆ ಹೇಳಿದರೆ, ‘ಅದು ನಮ್ಮಿಂದ ಸಾಧ್ಯವಿಲ್ಲ, ಮೇಲಧಿಕಾರಿಗಳಿಂದ ಅನುಮತಿ ಪಡೆಯದೇ ಯಾವ ಕೆಲಸವನ್ನೂ ಮಾಡುವಂತಿಲ್ಲ’ ಎಂದು ಎಂಜಿನಿಯರ್‌ ಪ್ರತಿಕ್ರಿಯಿಸುತ್ತಾರೆ. ಜನಸಾಮಾನ್ಯರ ಸಮಸ್ಯೆ ಅವರಿಗೆ ಅರ್ಥವೇ ಆಗುವುದಿಲ್ಲ. ಇನ್ನೆಷ್ಟು ಮಂದಿ ಈ ಗುಂಡಿಗಳಲ್ಲಿ ಬಿದ್ದು ಕೈ ಕಾಲು ಮುರಿದುಕೊಳ್ಳಬೇಕು’ ಎಂದು ಪ್ರಶ್ನಿಸಿದರು.

‘ಈ ರಸ್ತೆಯಲ್ಲಿ ಲಘು ಹಾಗೂ ಭಾರಿ ವಾಹನಗಳು ನಿರಂತರವಾಗಿ ಸಂಚರಿಸುತ್ತಲೇ ಇರುತ್ತವೆ. ದ್ವಿಚಕ್ರವಾಹನಗಳು ಸಾಕಷ್ಟು ಸಂಖ್ಯೆಯಲ್ಲಿ ಓಡಾಡುತ್ತವೆ. ಹೀಗಾಗಿ ಸಂಜೆ ವೇಳೆಯಲ್ಲಿ ದಟ್ಟಣೆ ಉಂಟಾಗುತ್ತದೆ. ಒಮ್ಮೊಮ್ಮೆ ಈ ದಟ್ಟಣೆಯಲ್ಲಿ ಆಂಬುಲೆನ್ಸ್‌ಗಳೂ ಸಿಲುಕಿಕೊಂಡು ರೋಗಿಗಳು ಸಂಕಷ್ಟ ಅನುಭವಿಸಬೇಕಾಗುತ್ತದೆ. ಬೇಸಿಗೆಯಲ್ಲಿ ರಸ್ತೆಯ ಮೇಲಿನ ದೂಳೆಲ್ಲಾ ಅಂಗಡಿಯೊಳಗೆ ಸೇರಿಕೊಳ್ಳುತ್ತದೆ. ಉಸಿರಾಡುವುದಕ್ಕೂ ಸಮಸ್ಯೆಯಾಗುತ್ತದೆ. ಅಂಗಡಿಯ ಮುಂದಿಟ್ಟಿರುವ ಪಾತ್ರೆಗಳ ಮೇಲೂ ದೂಳು ಕುಳಿತಿರುತ್ತದೆ. ಅದನ್ನು ಕೊಡವಿ ಕೊಡವಿ ಸಾಕಾಗಿ ಹೋಗುತ್ತದೆ’ ಎಂದು ಪಾತ್ರೆ ವ್ಯಾಪಾರಿ ಶ್ರೀನಿವಾಸ್‌ ಅಳಲು ತೋಡಿಕೊಂಡರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.