ಬಿಬಿಎಂಪಿ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗುತ್ತಿರುವ ಕಾಮಗಾರಿ ಬಿಲ್ ಸಲ್ಲಿಕೆ ಹಾಗೂ ಅನುಮೋದನೆಯಲ್ಲಿ ಸರಳೀಕರಣಗೊಳಿಸಿ, ಪಾರದರ್ಶಕತೆ ತರಲು ಬಿಲ್ ಪಾವತಿ ಪ್ರಕ್ರಿಯೆಯನ್ನು ಪೂರ್ಣ ಪ್ರಮಾಣದಲ್ಲಿ ಐಎಫ್‌ಎಂಎಸ್ ತಂತ್ರಾಂಶದಲ್ಲೇ ನಿರ್ವಹಿಸಲು ತೀರ್ಮಾನಿಸಲಾಗಿದೆ.
ಪ್ರಸ್ತುತ ಪಾಲಿಕೆಯಲ್ಲಿ ಬಿಲ್ ಸಲ್ಲಿಕೆ ಹಾಗೂ ಅನುಮೋದನೆ ಭೌತಿಕ ಕಡತದ ಮೂಲಕ ಆಗುತ್ತಿದೆ. ಇದರಿಂದಾಗಿ ವಿಳಂಬವಾಗಿ బిಲ್ ಪಾವತಿಯಾಗುತ್ತಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಗುತ್ತಿಗೆದಾರರ ಸಂಘದ ಮನವಿಯಂತೆ ಬಿಲ್ ಪಾವತಿ ವಿಧಾನವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುವ ದೃಷ್ಟಿಯಿಂದ ಬಿಲ್ ದಾಖಲೆಗಳು ಹಾಗೂ ಕಡತಗಳನ್ನು ಐಎಫ್‌ಎಂಎಸ್ ತಂತ್ರಾಂಶದಲ್ಲಿ ಅಳವಡಿಸಲಾಗುವುದು ಎಂದು ಹಣಕಾಸು ವಿಭಾಗದ ವಿಶೇಷ ಆಯುಕ್ತ ಶಿವಾನಂದ್ ಕಲಕೇರಿ ತಿಳಿಸಿದ್ದಾರೆ.
ಗುತ್ತಿಗೆದಾರರು ತಮ್ಮ ಲಾಗಿನ್ ಮೂಲಕ ಐಎಫ್‌ಎಂಎಸ್ ತಂತ್ರಾಂಶದಲ್ಲಿ ಸೂಕ್ತ ದಾಖಲಾತಿಗಳನ್ನು ದಾಖಲಿಸಬಹದು. ಗುತ್ತಿಗೆದಾರರಿಗೆ ಸಾಧ್ಯವಾಗದೇ ಇದ್ದರೆ, ಅಧಿಕಾರಿಗಳಿಂದ ದಾಖಲಿಸಲು ಅವಕಾಶ ಕಲ್ಪಿಸಲಾಗಿರುತ್ತದೆ. ಈ ಸಂಬಂಧ ಅಧಿಕಾರಿಗಳಿಗೆ ಆನ್‌ಲೈನ್ ತರಬೇತಿ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಗೂ ಸಹ ತರಬೇತಿಯನ್ನು ನೀಡಲಾಗುವುದು. ಬಿಲ್ ಪಾವತಿಯ ಪ್ರಕ್ರಿಯೆ ಕುರಿತು ಮಾರ್ಗಸೂಚಿಗಳನ್ನೂ ಜಾರಿಗೆ ತರಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಐಎಫ್‌ಎಂಎಸ್ ತಂತ್ರಾಂಶದಲ್ಲೇ ಬಿಲ್‌ಗಳ ಪೂರ್ಣ ಪ್ರಕ್ರಿಯೆ ಆರಂಭಿಸಲು ಜುಲೈ 6ರಂದೇ ಆದೇಶ ಹೊರಡಿಸಲಾಗಿತ್ತು. ಆದರೆ ಅದನ್ನು ಅನುಷ್ಠಾನ ಮಾಡಿರಲಿಲ್ಲ. ಬಿಬಿಎಂಪಿ ಗುತ್ತಿಗೆದಾರರು ಸೋಮವಾರದಿಂದ ಪ್ರತಿಭಟನೆ ನಡೆಸಲು ಉದ್ದೇಶಿಸಿರುವುದರಿಂದ ಗುರುವಾರ ರಾತ್ರಿ ಹಳೆಯ ಆದೇಶವನ್ನೇ ಉಲ್ಲೇಖಿಸಿ, ‘ಅನುಷ್ಠಾನ ಮಾಡಲಾಗುತ್ತದೆ’ ಎಂದು ಪ್ರಕಟಣೆ ಹೊರಡಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.