ADVERTISEMENT

ಐಐಎಸ್‌ಸಿಯಿಂದ ವೆಂಟಿಲೇಟರ್‌ ಅಭಿವೃದ್ಧಿ

ಏಪ್ರಿಲ್‌ ತಿಂಗಳಾಂತ್ಯದೊಳಗೆ ತಯಾರಕರಿಗೆ ಮಾದರಿ ಸಿದ್ಧ: ಪ್ರೊ. ಬ್ಯಾನರ್ಜಿ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2020, 20:41 IST
Last Updated 1 ಏಪ್ರಿಲ್ 2020, 20:41 IST
ಅಭಿವೃದ್ಧಿ ಹಂತದಲ್ಲಿರುವ ವೆಂಟಿಲೆಟರ್‌ನ ಮಾದರಿ
ಅಭಿವೃದ್ಧಿ ಹಂತದಲ್ಲಿರುವ ವೆಂಟಿಲೆಟರ್‌ನ ಮಾದರಿ   

ಬೆಂಗಳೂರು: ಭಾರತೀಯ ವಿಜ್ಞಾನ ಸಂಸ್ಥೆಯ ಎಂಜಿನಿಯರ್‌ಗಳು ಕೋವಿಡ್‌–19 ಸೋಂಕಿತರಿಗೆಂದೇ ವಿಶೇಷ ವೆಂಟೆಲೇಟರ್‌ ಅಭಿವೃದ್ಧಿಪಡಿಸಿದ್ದಾರೆ.

ಸದ್ಯಕ್ಕೆ ಇದು ಮಾದರಿ ಹಂತದಲ್ಲಿದೆ (ಪ್ರೊಟೋ ಟೈಪ್‌). ಲಭ್ಯವಿರುವ ಕೆಲವು ಸರಳ ವಸ್ತುಗಳನ್ನು (ಜಲ ಮತ್ತು ಗಾಳಿ ಶುದ್ಧಿಕರಿಸುವ ಪ್ಯೂರಿಫೈಯರ್ಸ್‌) ಬಳಸಿಕೊಂಡಿದ್ದಾರೆ.

ಕೋವಿಡ್‌–19 ನಿಂದ ಶ್ವಾಸಕೋಶಕ್ಕೆ ಹಾನಿಯಾಗಿದ್ದರೆ ಅಂತಹ ರೋಗಿಗಳ ಪ್ರಾಣ ಉಳಿಸುವ ಅಮೂಲ್ಯ ಸಾಧನ ಇದಾಗಿದೆ. ಕೊರೊನಾ ವೈರಸ್‌ ಜಗತ್ತಿನ ಎಲ್ಲ ಕಡೆಗಳಲ್ಲಿ ವ್ಯಾಪಕವಾಗಿ ಹರಡಿದ್ದು, ಎಲ್ಲ ದೇಶಗಳಂತೆ ಭಾರತದಲ್ಲೂ ವೆಂಟಿಲೇಟರ್‌ಗಳ ಕೊರತೆ ತೀವ್ರವಾಗಿ ಕಾಡುತ್ತಿದೆ. ಈಗಿನ ತುರ್ತು ಸಂದರ್ಭದಲ್ಲಿ ವಿದೇಶಗಳಿಂದ ಸೆನ್ಸರ್‌ ಮತ್ತು ಹರಿವು ನಿಯಂತ್ರಕಗಳನ್ನು ಆಮದು ಮಾಡಿಕೊಳ್ಳಲು ಸಾಧ್ಯವೇ ಇಲ್ಲ.ಮುಂದಿನ ದಿನಗಳಲ್ಲಿ ಇದು ವರದಾನವಾಗಲಿದೆ.

ADVERTISEMENT

ವೆಂಟಿಲೇಟರ್‌ಗಳ ಅಭಾವದ ಹಿನ್ನೆಲೆಯಲ್ಲಿ ಐಐಎಸ್‌ಸಿಯ ಎಂಜಿನಿಯರ್‌ಗಳ ತಂಡ ಭಾರತದಲ್ಲೇ ತಯಾರಾದ ವಸ್ತುಗಳನ್ನು ಬಳಸಿ ‘ಎಲೆಕ್ಟ್ರೋ ಮೆಕಾನಿಕಲ್‌ ವೆಂಟಿಲೇಟರ್‌’ ಅಭಿವೃದ್ಧಿಪಡಿಸಿದ್ದಾರೆ. ಯುಕೆಯ ಮೆಡಿಸಿನ್ಸ್‌ ಅಂಡ್‌ ಹೆಲ್ತ್‌ಕೇರ್‌ ಪ್ರಾಡಕ್ಟ್ಸ್‌ ರೆಗ್ಯುಲೇಟರಿ ಏಜೆನ್ಸಿಯ ಮಾರ್ಗಸೂಚಿಯನ್ನೇ ಅನುಸರಿಸಿ ಇದನ್ನು ಅಭಿವೃದ್ಧಿಪಡಿಸಲಾಗಿದೆ. ಬಳಕೆಗೆ ಸಿದ್ಧವಿರುವ ವೆಂಟಿಲೇಟರ್‌ ಇನ್ನು ಕೆಲವೇ ವಾರಗಳಲ್ಲಿ ತಯಾರಾಗಲಿದೆ. ಇದನ್ನು ಹೆಚ್ಚು ಪ್ರಮಾಣದಲ್ಲಿ ತಯಾರಿಸಿ ಉಚಿತವಾಗಿ ವಿತರಿಸಬಹುದು ಎಂದು ಎಲೆಕ್ಟ್ರೋ ಸಿಸ್ಟಂ ಎಂಜಿನಿಯರಿಂಗ್‌ ವಿಭಾಗದ ಪ್ರಧಾನ ಸಂಶೋಧಕ ಟಿ.ವಿ.ಪ್ರಭಾಕರ್‌ ತಿಳಿಸಿದರು.

‘ಕಳೆದ 10 ದಿನಗಳಿಂದ ಈ ತಂತ್ರಜ್ಞಾನ ಅಭಿವೃದ್ಧಿಪಡಿಸಲು ಹಗಲು– ರಾತ್ರಿ ಎನ್ನದೇ ಕೆಲಸ ಮಾಡುತ್ತಿದ್ದೇವೆ. ಏಪ್ರಿಲ್‌ ಕೊನೆ ವೇಳೆಗೆ ತಯಾರಕರಿಗೆ ಮಾದರಿ ಸಿದ್ಧಪಡಿಸಿಕೊಡುತ್ತೇವೆ. ಆ ಬಳಿಕ ತ್ವರಿತಗತಿಯಲ್ಲಿ ಉತ್ಪಾದನೆ ಮಾಡಬಹುದು’ ಎಂದು ಈ ಯೋಜನೆಯ ಸಂಚಾಲಕರಲ್ಲಿ ಒಬ್ಬರಾಗಿರುವ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವಿಭಾಗದ ಪ್ರೊ. ಗೌರವ್‌ ಬ್ಯಾನರ್ಜಿ ವಿವರಿಸಿದರು.

ದೇಶದಲ್ಲಿ ಸದ್ಯಕ್ಕೆ 40 ಸಾವಿರ ವೆಂಟಿಲೇಟರ್‌ಗಳಿವೆ. ಒಂದು ವೇಳೆ ಇದ್ದಕ್ಕಿದ್ದಂತೆ ಪ್ರಕರಣಗಳ ಸಂಖ್ಯೆ ಹೆಚ್ಚಾದರೆ, ಸಾವಿರಗಟ್ಟಲೆ ವೆಂಟಿಲೇಟರ್‌ಗಳನ್ನು ತ್ವರಿತಗತಿಯಲ್ಲಿ ಉತ್ಪಾದಿಸಬೇಕಾಗುತ್ತದೆ. ಕೋವಿಡ್‌–19 ರೋಗಿಗಳಲ್ಲಿ ಶ್ವಾಸಕೋಶಕ್ಕೆ ಹಾನಿ ಆಗುತ್ತದೆ. ಇದರಿಂದ ಸಾಕಷ್ಟು ಆಮ್ಲಜನಕವನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಇಂತಹವರಿಗೆ ವೆಂಟಿಲೇಟರ್‌ ಅಳವಡಿಸಿದಾಗ, ಇದರ ಸಹಾಯದಿಂದ ಶ್ವಾಸಕೋಶ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಅಲ್ಲದೆ, ನೀರು ಮತ್ತು ಆಮ್ಲಜನಕದ ಮಿಶ್ರಣವನ್ನು ನಿಯಮಿತವಾಗಿ ನೀಡಬಹುದು. ದೇಹದ ಅಗತ್ಯಕ್ಕೆ ತಕ್ಕಂತೆ ನಿಯಂತ್ರಿತ ಸ್ವರೂಪದಲ್ಲಿ ನೀರು ಮತ್ತು ಆಮ್ಲಜನಕ ಹರಿಸಲು ಸಾಧ್ಯವಾಗುತ್ತದೆ. ಇದರಿಂದ ದೇಹವು ಸೋಂಕಿನ ವಿರುದ್ಧ ಹೋರಾಡಲು ಸಾಮರ್ಥ್ಯ ಪಡೆಯುತ್ತದೆ.

ಈ ಸಾಧನದಲ್ಲಿ ಆಮ್ಲಜನಕ ಮತ್ತು ನೀರು ಹರಿಸಲು ಎಷ್ಟು ಒತ್ತಡ ಇರಬೇಕು ಮತ್ತು ಪ್ರಮಾಣದ ಬಗ್ಗೆ ವೈದ್ಯರು ನಿರ್ಧರಿಸಲು ಸೆನ್ಸರ್‌ ನೆರವಾಗುತ್ತದೆ. ವೈದ್ಯರು ಅದನ್ನು ಸೆಟ್‌ ಮಾಡಿ ಹೋದರೆ, ತನ್ನಷ್ಟಕ್ಕೆ ಕಾರ್ಯ ನಿರ್ವಹಿಸುತ್ತದೆ.

ಈಗ ಮಾರುಕಟ್ಟೆಯಲ್ಲಿ ಲಭ್ಯವಿರುವ ಬಹುಪಾಲು ವೆಂಟಿಲೇಟರ್‌ಗಳು ಭಾರತದಲ್ಲಿ ತಯಾರಾಗುತ್ತಿಲ್ಲ. ವಿದೇಶಗಳಿಂದ ತರಿಸಿಕೊಳ್ಳಲಾಗುತ್ತಿದೆ. ಇವುಗಳ ಬಿಡಿ ಭಾಗಗಳೂ ಇಲ್ಲಿ ಲಭ್ಯವಿಲ್ಲ. ಈ ಹಿನ್ನೆಲೆಯಲ್ಲಿ ಐಐಎಸ್‌ಸಿ ತಂಡ ಸ್ಥಳೀಯವಾಗಿ ಲಭ್ಯವಿರುವ ಫಿಲ್ಟರ್‌, ಕಂಟ್ರೋಲರ್‌ಗಳನ್ನು ಬಳಸಿಕೊಂಡೇ ವೆಂಟಿಲೇಟರ್‌ ಅಭಿವೃದ್ಧಿ ಪಡಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.