ADVERTISEMENT

ಬಾಂಗ್ಲಾದ ಅಕ್ರಮ ವಲಸಿಗರ ಗಡಿಪಾರು; ರಾಜ್ಯದಾದ್ಯಂತ ಅಭಿಯಾನ: ಸಿದ್ದೇಶ್ವರ

ಮಹದೇವಪುರ: ಬಿಜೆಪಿ ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 23:19 IST
Last Updated 14 ಜುಲೈ 2025, 23:19 IST
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಭಾರತಮಾತೆ, ಶಾಮಪ್ರಸಾದ್ ಮುಖರ್ಜಿ, ದೀನ್‌‌ದಯಾಳ್ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ್, ಮಾಜಿ ಶಾಸಕ ಅರವಿಂದ ಲಿಂಬಾವಳಿ ಮತ್ತಿತರರು ಭಾರತಮಾತೆ, ಶಾಮಪ್ರಸಾದ್ ಮುಖರ್ಜಿ, ದೀನ್‌‌ದಯಾಳ್ ಉಪಾಧ್ಯಾಯ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.   

ಪ್ರಜಾವಾಣಿ ವಾರ್ತೆ

ಕೆ.ಆರ್.ಪುರ: ‘ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶದ ವಲಸಿಗರನ್ನು ಹೊರಹಾಕುವ ಉದ್ದೇಶದಿಂದ ರಾಜ್ಯದಾದ್ಯಂತ ಅಭಿಯಾನ ಆರಂಭಿಸಲಾಗುವುದು’ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಮಹದೇವಪುರ ವಿಧಾನಸಭಾ ಕ್ಷೇತ್ರದ ರಾಮಗೊಂಡನಹಳ್ಳಿಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ‘ಬಾಂಗ್ಲಾದೇಶದ ಅಕ್ರಮ ವಲಸಿಗರನ್ನು ಗುರುತಿಸಿ ಮರಳಿ ಅವರ ದೇಶಕ್ಕೆ ಕಳುಹಿಸುವ’ ಅಭಿಯಾನದಲ್ಲಿ ಅವರು ಮಾತನಾಡಿದರು.

ADVERTISEMENT

‘ನಮ್ಮ ದೇಶದಲ್ಲಿ ಅಕ್ರಮವಾಗಿ ನೆಲಸಿರುವ ಬಾಂಗ್ಲಾದೇಶದ ಪ್ರಜೆಗಳನ್ನು ಗುರುತಿಸಿ ಗಡಿಪಾರು ಮಾಡಲು ಪ್ರಧಾನಿ ನರೇಂದ್ರ ಮೋದಿ ಕರೆಕೊಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮಹದೇವಪುರ ಕ್ಷೇತ್ರದಿಂದಲೇ ಅಕ್ರಮ ವಲಸಿಗರನ್ನು ಗುರುತಿಸಿ, ಹೊರಗೆ ಕಳಿಸುವ ಅಭಿಯಾನ ಕೈಗೊಂಡಿದ್ದೇವೆ. ಭಾನುವಾರದಿಂದಲೇ ರಾಜ್ಯದಾದ್ಯಂತ ಈ ಅಭಿಯಾನ ಕೈಗೊಳ್ಳಲಾಗುತ್ತಿದೆ’ ಎಂದು ತಿಳಿಸಿದರು.

ಮಾಜಿ ಶಾಸಕ ಅರವಿಂದ ಲಿಂಬಾವಳಿ ಮಾತನಾಡಿ, ‘ಮೂರು ತಿಂಗಳ ಹಿಂದಿನಿಂದಲೇ ಈ ಅಭಿಯಾನ ಆರಂಭಿಸಿದ್ದೇವೆ. ನಮ್ಮ ವಾರ್ ರೂಂಗೆ ರಾಜ್ಯದಾದ್ಯಂತ 3500ಕ್ಕೂ ಹೆಚ್ಚು ಕರೆಗಳು ಬಂದಿವೆ. ಆ ಪ್ರಕಾರ, ಚಿಂದಿ ಆಯುವವರು, ಕಸ ಹೆಕ್ಕುವವರು, ಡ್ರೈವಿಂಗ್‌, ಮನೆಗೆಲಸ ಮಾಡುವವರು ಬಾಂಗ್ಲಾದೇಶದವರಾಗಿದ್ದಾರೆ. ಇದೊಂದು ಅಘಾತಕಾರಿ ಬೆಳವಣಿಗೆ’ ಎಂದರು.

2003ರಲ್ಲಿ ತೂಬರಹಳ್ಳಿಯಲ್ಲಿ ಕಸದ ಸಮಸ್ಯೆ ಬಗ್ಗೆ ಪರಿಶೀಲನೆ ನಡೆಸುವಾಗ ಅಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ನೆಲಸಿರುವುದು ಗೊತ್ತಾಯಿತು. ನಂತರ ಸ್ಥಳೀಯರು ಮತ್ತು ಸರ್ಕಾರದ ಸಹಾಯದಿಂದ ಅವರನ್ನು ಖಾಲಿ ಮಾಡಿಸಲಾಗಿತ್ತು. ರಾಜ್ಯ ಸರ್ಕಾರ ಬಾಂಗ್ಲಾದೇಶದ ವಲಸಿಗರ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳದ್ದಿದ್ದರೆ ನಾವೇ ಅವರನ್ನು ಹೊರಹಾಕುವ ಕೆಲಸ ಮಾಡಲಿದ್ದೇವೆ’ ಎಂದರು.

ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಮಾತನಾಡಿದರು. ಇದೇ ವೇಳೆ ಬಾಂಗ್ಲಾದೇಶದ ಇತಿಹಾಸ, ಬಾಂಗ್ಲಾದೇಶದಿಂದ ಭಾರತಕ್ಕೆ ಅಕ್ರಮವಾಗಿ ನುಸುಳುವ ಬಗ್ಗೆ, ಅವರಿಂದ ದೇಶಕ್ಕಾಗುವ ನಷ್ಟ ಮತ್ತು ರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗುತ್ತಿರುವುದರ ಬಗ್ಗೆ ಬೆಳಕು ಚೆಲ್ಲುವ ವಿಡಿಯೊವನ್ನು ಪ್ರದರ್ಶಿಸಲಾಯಿತು.

ಮಹದೇವಪುರ ಕ್ಷೇತ್ರದ ಶಾಸಕಿ ಮಂಜುಳಾ ಲಿಂಬಾವಳಿ, ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಹರಿಹರ ಶಾಸಕ ಬಿ.ಪಿ.ಹರೀಶ್, ಮಾಜಿ ಸಂಸದರಾದ ಪ್ರತಾಪ್ ಸಿಂಹ, ಬಿ.ವಿ.ನಾಯಕ್, ನಗರ ಮಂಡಲ ಅಧ್ಯಕ್ಷ ಶ್ರೀಧರ್ ರೆಡ್ಡಿ, ಗ್ರಾಮಾಂತರ ಮಂಡಲ ಅಧ್ಯಕ್ಷ ಹೆಚ್.ಎಸ್.ಪಿಳ್ಳಪ್ಪ, ರಾಜೇಶ್, ಮನೋಹರ್ ರೆಡ್ಡಿ, ಮಹೇಂದ್ರ ಮೋದಿ, ಜಯದೇವರಾಜ ಇದ್ದರು.

ಅಕ್ರಮ ಬಾಂಗ್ಲಾ ವಲಸಿಗರ ಹಾವಳಿ ಮಿತಿಮೀರಿದ್ದು,ಸಾರ್ವಜನಿಕರ ಸುರಕ್ಷತೆಗಾಗಿ ರಾಜ್ಯ ಸರ್ಕಾರ ಅಂಥವರನ್ನು ಪತ್ತೆಹಚ್ಚಿ ಗಡಿಪಾರು ಮಾಡಲು ಕ್ರಮ ಕೈಗೊಳ್ಳಬೇಕು
ಆರ್‌.ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.