ಶೋಭಾ ಕರಂದ್ಲಾಜೆ
ಬೆಂಗಳೂರು: ಹೆಬ್ಬಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಮಾನಿಕೆರೆ ಗ್ರಾಮದಲ್ಲಿ ಅಕ್ರಮವಾಗಿ ಶೆಡ್‌ಗಳನ್ನು ಹಾಕಿಕೊಂಡು ವಾಸಮಾಡುತ್ತಿರುವ ಬಾಂಗ್ಲಾದೇಶದ ಸಾವಿರಾರು ವಲಸಿಗರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.
ಈ ಸಂಬಂಧ ನಗರ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಅವರಿಗೆ ಪತ್ರ ಬರೆದಿರುವ ಅವರು, ‘ಹೆಬ್ಬಾಳದಲ್ಲಿ ಬಿಎಂಆರ್‌ಸಿಎಲ್ ಕಾಮಗಾರಿ ಪರಿಶೀಲನೆ ವೇಳೆ ಅಮಾನಿಕೆರೆ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಕ್ರಮ ವಲಸಿಗರು ವಾಸಿಸುತ್ತಿರುವುದು ಗಮನಕ್ಕೆ ಬಂತು. ಬಾಂಗ್ಲಾದೇಶದ ಅಂದಾಜು 3,500 ಪ್ರಜೆಗಳನ್ನು ಗುತ್ತಿಗೆದಾರರು ನಗರಕ್ಕೆ ಕರೆತಂದಿದ್ದಾರೆ. ಅವರ ಬಳಿ ನಕಲಿ ಆಧಾರ್ ಕಾರ್ಡ್, ಗುರುತಿನ ಚೀಟಿ ಇದೆ. ಅಕ್ರಮವಾಗಿ ಶೆಡ್ ಹಾಕಿಕೊಂಡು, ವಿದ್ಯುತ್ ಸಂಪರ್ಕ ಪಡೆದುಕೊಂಡಿದ್ದಾರೆ. ರಾಷ್ಟ್ರೀಯ ಭದ್ರತಾ ಹಿತದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳಬೇಕು’ ಎಂದು ತಿಳಿಸಿದ್ದಾರೆ.
‘ನಿಯಮಬಾಹಿರವಾಗಿ ಪ್ಲಾಸ್ಟಿಕ್, ತ್ಯಾಜ್ಯವನ್ನು ಇಲ್ಲಿ ಶೇಖರಿಸಿ ಸುಡುವ ಕೆಲಸ ಮಾಡುತ್ತಿದ್ದಾರೆ. ಕಸದ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಪರಿಸರ ಹಾಳಾಗುತ್ತಿದೆ. ಹೆಬ್ಬಾಳ ಮತ್ತು ಸುತ್ತಮುತ್ತಲ ಪ್ರದೇಶಗಳ ಜನರಿಗೆ ಆರೋಗ್ಯ ಸಮಸ್ಯೆ ಉಂಟಾಗಲಿದೆ’ ಎಂದು ಹೇಳಿದ್ದಾರೆ.
‘ತಕ್ಷಣ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಬೇಕು. ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ) ಅಧಿಕಾರಿಗಳು ಕೂಡಲೇ ವಲಸಿಗರ ದಾಖಲೆ ಪರಿಶೀಲನೆ ನಡೆಸಬೇಕು. ವಲಸಿಗರನ್ನು ನಗರಕ್ಕೆ ಕರೆತಂದು, ನಕಲಿ ಆಧಾರ್, ಗುರುತಿನ ಚೀಟಿ ನೀಡಿರುವ ಗುತ್ತಿಗೆದಾರರು ಮತ್ತು ಏಜೆಂಟರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.