ADVERTISEMENT

ಯುವರಾಜ್ ಹೆಸರಿನಲ್ಲಿ ₹ 60 ಕೋಟಿ ಮೌಲ್ಯದ ಆಸ್ತಿ !

ಕೆಲಸದ ಆಮಿಷ; ಸೇವಾಲಾಲ್ ಸ್ವಾಮೀಜಿ ವಿರುದ್ಧ ಮತ್ತೆರಡು ಎಫ್‌ಐಆರ್

​ಪ್ರಜಾವಾಣಿ ವಾರ್ತೆ
Published 16 ಜನವರಿ 2021, 19:31 IST
Last Updated 16 ಜನವರಿ 2021, 19:31 IST
ಯುವರಾಜ್
ಯುವರಾಜ್   

ಬೆಂಗಳೂರು: ಬಿಜೆಪಿ ಹಾಗೂ ಆರ್‌ಎಸ್‌ಎಸ್ ಮುಖಂಡರ ಹೆಸರು ಹೇಳಿಕೊಂಡು ಜನರಿಂದ ಕೋಟ್ಯಂತರ ರೂಪಾಯಿ ಪಡೆದು ವಂಚಿಸಿರುವ ಆರೋಪದಡಿ ಬಂಧಿಸಲಾಗಿರುವ ಯುವರಾಜ್ ಅಲಿಯಾಸ್ ಸೇವಾಲಾಲ್ ಸ್ವಾಮೀಜಿಗೆ ಸೇರಿದ್ದ ಸುಮಾರು ₹ 60 ಕೋಟಿ ಮೌಲ್ಯದ ಆಸ್ತಿಯನ್ನು ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಆಸ್ತಿಗಳ ಬಗ್ಗೆ ನ್ಯಾಯಾಲಯಕ್ಕೂ ಮಾಹಿತಿ ನೀಡಿದ್ದಾರೆ.

‘ಆರೋಪಿ ಯುವರಾಜ್ ಅವರನ್ನು ಬಂಧಿಸಿ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗಿದೆ. ಅವರು ಹಾಗೂ ಪತ್ನಿ ಪ್ರೇಮಾ ಹೆಸರಿನಲ್ಲಿರುವ 18 ಆಸ್ತಿಗಳನ್ನು ಗುರುತಿಸಲಾಗಿದೆ’ ಎಂದು ಸಿಸಿಬಿ ಮೂಲಗಳು ಹೇಳಿವೆ.

‘ಬೆಂಗಳೂರಿನಲ್ಲಿರುವ ಮನೆ, ನಿವೇಶನ, ಮಂಡ್ಯದಲ್ಲಿರುವ ಜಮೀನು, ಐಷಾರಾಮಿ ಕಾರುಗಳು ಸೇರಿದಂತೆ ಸುಮಾರು ₹ 60 ಕೋಟಿ ಮೌಲ್ಯದ ಸ್ಥಿರಾಸ್ತಿ ಹಾಗೂ ಚರಾಸ್ತಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದೆ. ಅವುಗಳ ಪಟ್ಟಿ ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದೂ ತಿಳಿಸಿವೆ.

ADVERTISEMENT

ಮತ್ತೆರಡು ಎಫ್‌ಐಆರ್; ‘ರಾಜ್ಯ ಸರ್ಕಾರದ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಹಾಗೂ ಕೆಎಂಎಫ್‌ನಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಕೆಲಸ ಕೊಡಿಸುವುದಾಗಿ ಹೇಳಿ ₹ 1 ಕೋಟಿ ಪಡೆದು ವಂಚಿಸಿರುವ ಬಗ್ಗೆ ಜ್ಞಾನಭಾರತಿ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಆರೋಪಿ ಯುವರಾಜ್, ಸದ್ಯ ಸಿಸಿಬಿ ಕಸ್ಟಡಿಯಲ್ಲಿ ಇದ್ದಾರೆ. ಅವರ ವಿರುದ್ಧ ದಾಖಲಾಗಿರುವ ಪ್ರಕರಣದ ಬಗ್ಗೆ ಕಮಿಷನರ್ ಅವರಿಗೆ ಮಾಹಿತಿ ನೀಡಲಾಗುವುದು. ಅವರ ನಿರ್ದೇಶನದಂತೆ ಮುಂದುವರಿಯಲಾಗುವುದು’ ಎಂದೂ ತಿಳಿಸಿವೆ.

ದೂರುದಾರ ನರಸಿಂಹಸ್ವಾಮಿ ಎಂಬುವರು, ‘ಬಿಜೆಪಿ ಮುಖಂಡರು ಆತ್ಮೀಯರೆಂದು ಹೇಳಿ ಪರಿಚಯ ಮಾಡಿಕೊಂಡಿದ್ದ ಯುವರಾಜ್, ನನ್ನ ಪುತ್ರನಿಗೆ ಸಹಾಯಕ ಎಂಜಿನಿಯರ್ ಕೆಲಸ ಕೊಡಿಸುವುದಾಗಿ ಹೇಳಿ ₹ 70 ಲಕ್ಷ ಪಡೆದಿದ್ದ. ಆದರೆ, ಇದುವರೆಗೂ ಕೆಲಸ ಕೊಡಿಸಿಲ್ಲ. ಹಣವನ್ನು ವಾಪಸ್‌ ನೀಡಿಲ್ಲ’ ಎಂದರು.

‘ ಆತ್ಮೀಯರೊಬ್ಬರ ಮೂಲಕ ಆರೋಪಿ ಯುವರಾಜ್ ಪರಿಚಯ ಆಗಿತ್ತು. ಬಿಜೆಪಿ ಮುಖಂಡರ ಜೊತೆಗಿನ ಫೋಟೊಗಳನ್ನು ತೋರಿಸಿದ್ದ ಅವರು. ಸರ್ಕಾರದ ಯಾವುದೇ ಇಲಾಖೆಯಲ್ಲಾದರೂ ಕೆಲಸ ಕೊಡಿಸುತ್ತೇನೆಂದು ಹೇಳಿದ್ದ. ಅವರ ಮಾತು ನಂಬಿ ಹಣ ಕೊಟ್ಟಿದ್ದೆ’ ಎಂದೂ ದೂರಿನಲ್ಲಿ ತಿಳಿಸಿದ್ದಾರೆ.

ಕೆಎಂಎಫ್‌ನಲ್ಲಿ ಕೆಲಸಕ್ಕೆ ₹ 30 ಲಕ್ಷ: ‘ಕೆಎಂಎಫ್‌ನಲ್ಲಿ ಮಾರುಕಟ್ಟೆ ವ್ಯವಸ್ಥಾಪಕ ಕೆಲಸ ಕೊಡಿಸುವುದಾಗಿ ಹೇಳಿದ್ದ ಯುವರಾಜ್, ₹ 30 ಲಕ್ಷ ಪಡೆದು ವಂಚಿಸಿದ್ದಾರೆ’ ಎಂದು ಆರೋಪಿಸಿ ಗೋವಿಂದಯ್ಯ ಎಂಬುವರು ದೂರು ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.