ADVERTISEMENT

ಕೇಬಲ್ ತೆರವಿಗೆ ತಿಂಗಳ ಗಡುವು ನೀಡಿದ ಬಿಬಿಎಂಪಿ

ಅನಧಿಕೃತ ಕೇಬಲ್‌ ಅಳವಡಿಕೆ ವಿರುದ್ಧ ಕಾನೂನು ಕ್ರಮ: ಬಿಬಿಎಂಪಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 25 ಆಗಸ್ಟ್ 2021, 5:12 IST
Last Updated 25 ಆಗಸ್ಟ್ 2021, 5:12 IST
ಆಪ್ಟಿಕ್‌ ಪೈಬರ್‌ ಕೇಬಲ್‌
ಆಪ್ಟಿಕ್‌ ಪೈಬರ್‌ ಕೇಬಲ್‌   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ರಸ್ತೆ, ಪಾದಚಾರಿ ಮಾರ್ಗ, ರಸ್ತೆ ಪಕ್ಕದ ಮರಗಳು ಮತ್ತು ವಿದ್ಯುತ್ ಕಂಬಗಳ ಮೇಲೆ ಅನಧಿಕೃತವಾಗಿ ನೇತುಹಾಕಿರುವ ಟಿ.ವಿ ಕೇಬಲ್ ಹಾಗೂ ಆಪ್ಟಿಕ್‌ ಪೈಬರ್‌ ಕೇಬಲ್‌ಗಳನ್ನು (ಒಎಫ್‌ಸಿ) ತೆರವುಗೊಳಿಸಬೇಕು ಎಂದು ಬಿಬಿಎಂಪಿಯು ಕೇಬಲ್‌ ಆಪರೇಟರ್‌ಗಳಿಗೆ ಹಾಗೂ ಇಂಟರ್ನೆಟ್‌ ಸೇವೆ ಒದಗಿಸುವ ಸಂಸ್ಥೆಗಳಿಗೆ ಸೂಚಿಸಿದೆ. ಅನಧಿಕೃತ ಕೇಬಲ್‌ಗಳನ್ನು ತೆರವುಗೊಳಿಸಲು ಒಂದು ತಿಂಗಳ ಗಡುವು ವಿಧಿಸಿದೆ.

ನಗರದಲ್ಲಿ ಅನಧಿಕೃತವಾಗಿ ನೇತುಹಾಕಿರುವ ಕೇಬಲ್‌ಗಳನ್ನು ತೆರವುಗೊಳಿಸುವಂತೆ ಹೈಕೋರ್ಟ್‌ 2021ರ ಫೆ.24ರಂದು ಹಾಗೂ ಆ. 3ರಂದು ಆದೇಶ ಮಾಡಿತ್ತು. ಹೈಕೋರ್ಟ್‌ ಚಾಟಿ ಬೀಸಿದ ಬಳಿಕ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ಕೇಬಲ್‌ ತೆರವಿಗೆ ಸಂಬಂಧಿಸಿ ಮಂಗಳವಾರ ಸಾರ್ವಜನಿಕ ಪ್ರಕಟಣೆಯನ್ನು ನೀಡಿದೆ.

‘ಅನಧಿಕೃತವಾಗಿ ಅಳವಡಿಸಿರುವ ಎಲ್ಲಾ ಟಿ.ವಿ. ಕೇಬಲ್, ಒಎಫ್‌ಸಿ ಹಾಗೂ ಇತರೆ ಕೇಬಲ್‌ಗಳನ್ನು ಈ ತಿಳಿವಳಿಕೆ ಪತ್ರ ಪ್ರಕಟಣೆಯಾದ ದಿನದಿಂದ ಒಂದು ತಿಂಗಳ ಒಳಗೆ ತೆರವುಗೊಳಿಸದೇ ಹೋದರೆ, ಸಂಬಂಧಪಟ್ಟ ಕೇಬಲ್ ಆಪರೇಟರ್‌ಗಳು, ಇಂಟರ್ನೆಟ್‌ ಸೇವೆ ಒದಗಿಸುವ ಸಂಸ್ಥೆಗಳು ಹಾಗೂ ಸಂಬಂಧಪಟ್ಟ ಇತರ ಸಂಸ್ಥೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಎಚ್ಚರಿಕೆ ನೀಡಿದ್ದಾರೆ.

ADVERTISEMENT

‘ಅನಧಿಕೃತ ಕೇಬಲ್‌ಗಳನ್ನು ಅಳವಡಿಸಿದ ಸಂಸ್ಥೆಗಳೇ ಅವುಗಳನ್ನು ತೆರವುಗೊಳಿಸದಿದ್ದರೆ, ಬಿಬಿಎಂಪಿಯು ಯಾವುದೇ ಮುನ್ಸೂಚನೆ ನೀಡದೆ ತೆರವುಗೊಳಿಸಲಿದೆ’ ಎಂದೂ ಅವರೂ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.