ಬಿಬಿಎಂಪಿಯಲ್ಲಿ ನಡೆದ ಸಭೆ
ಬೆಂಗಳೂರು: ‘ಬಿಬಿಎಂಪಿಗೆ ಕಂದಾಯ ಪರಿವೀಕ್ಷಕರನ್ನು ವೃಂದ ಮತ್ತು ನೇಮಕಾತಿ ನಿಯಮಾವಳಿಗೆ ವಿರುದ್ಧವಾಗಿ ನಗರಾಭಿವೃದ್ಧಿ ಇಲಾಖೆಯಿಂದ ನಿಯೋಜಿಸಲಾಗಿದೆ. ಈ ಕಾನೂನುಬಾಹಿರ ಆದೇಶವನ್ನು ವಾಪಸ್ ಪಡೆಯಬೇಕು’ ಎಂದು ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘ ಒತ್ತಾಯಿಸಿದೆ.
ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರಿಗೆ ಸಂಘದ ಅಧ್ಯಕ್ಷ ಎ. ಅಮೃತ್‌ರಾಜ್ ಅವರು ಜುಲೈ 26ರಂದು ಪತ್ರ ಬರೆದಿದ್ದಾರೆ. ‘ಮೈಸೂರು ಮಹಾನಗರ ಪಾಲಿಕೆಯಿಂದ ಅಶ್ವಿನಿ, ರೇಷ್ಮೆ ಇಲಾಖೆಯಿಂದ ನಿತಿನ್, ರಾಮನಗರ ನಗರಸಭೆಯಿಂದ ರಕ್ಷಿತ್ ಅವರನ್ನು ಬಿಬಿಎಂಪಿಯ ಕಂದಾಯ ಪರಿವೀಕ್ಷಕರಾಗಿ ನಿಯೋಜಿಸಲಾಗಿದೆ. ಇದು ಕಾನೂನುಬಾಹಿರ’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
‘2020ರ ವೃಂದ ಮತ್ತು ನೇಮಕಾತಿ ನಿಯಮಾವಳಿಯಲ್ಲಿ ಶೇ 25ರಷ್ಟು ಕಂದಾಯ ಪರಿವೀಕ್ಷಕರ ಹುದ್ದೆಯನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಮೀಸಲಿಡಲಾಗಿದೆ. ಕಂದಾಯ ವಸೂಲಿಗಾರರು/ ದ್ವಿತೀಯ ದರ್ಜೆ ಗುಮಾಸ್ತರು ಅಧಿಕ ಪ್ರಭಾರದ ಮೇಲೆ ಕಂದಾಯ ಪರಿವೀಕ್ಷಕರ ಹುದ್ದೆಯಲ್ಲಿದ್ದರೂ 27 ಮಂದಿ ಆರ್ಥಿಕ ಸೌಲಭ್ಯ ಪಡೆಯಲು ವಂಚಿತರಾಗಿದ್ದಾರೆ. ಈ ಮಧ್ಯೆ ಕಂದಾಯ ಪರಿವೀಕ್ಷಕರನ್ನು ನಿಯೋಜನೆ ಮೇರೆಗೆ ಇತರೆ ಇಲಾಖೆಗಳಿಂದ ಬಿಬಿಎಂಪಿಗೆ ಕರೆತರುತ್ತಿರುವುದು ಸರಿಯಲ್ಲ’ ಎಂದು ಹೇಳಿದ್ದಾರೆ.
‘ಈ ನಿಯೋಜನೆ ಆದೇಶವನ್ನು ಕೂಡಲೇ ಹಿಂಪಡೆಯಬೇಕು. ಇಲ್ಲದ್ದಿದ್ದಲ್ಲಿ, ನ್ಯಾಯಯುತ ಬೇಡಿಕೆಗಾಗಿ ಮುಂದಿನ ದಿನಗಳಲ್ಲಿ ಹೋರಾಟ ನಡೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.