ADVERTISEMENT

ಬೆಂಗಳೂರಿನಲ್ಲಿ ರೆಮ್‌ಡಿಸಿವಿರ್ ಮಾರುವುದಾಗಿ ವಂಚನೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 19 ಮೇ 2021, 15:46 IST
Last Updated 19 ಮೇ 2021, 15:46 IST
ಬಂಧಿತ ಆರೋಪಿಗಳು
ಬಂಧಿತ ಆರೋಪಿಗಳು   

ಬೆಂಗಳೂರು: ವಾಟ್ಸ್‌ಆ್ಯಪ್ ಮೂಲಕಸಾರ್ವಜನಿಕರನ್ನು ಸಂಪರ್ಕಿಸಿ, ರೆಮ್‌ಡಿಸಿವಿರ್ ಹಾಗೂ ಕೊರೊನಾಗೆ ಔಷಧಗಳನ್ನು ಮಾರಾಟ ಮಾಡುವುದಾಗಿ ಹಣ ಪಡೆದು ಜನರನ್ನು ವಂಚಿಸುತ್ತಿದ್ದ ನೈಜೀರಿಯಾ ಪ್ರಜೆ ಸೇರಿದಂತೆ ಇಬ್ಬರು ಆರೋಪಿಗಳನ್ನು ಕೇಂದ್ರ ವಿಭಾಗದ ಸೆನ್(ಸೈಬರ್, ಆರ್ಥಿಕ ಅಪರಾಧ ಹಾಗೂ ಮಾದಕ ವಸ್ತು) ಪೊಲೀಸರು ಬಂಧಿಸಿದ್ದಾರೆ.

ವಿದ್ಯಾರಣ್ಯಪುರದ ಆದಿತ್ಯ ನಗರದ ನಿವಾಸಿ ಮಹಮ್ಮದ್ ಇಸ್ಮಾಯಿಲ್ ಖಾದ್ರಿ (43) ಹಾಗೂ ಯಲಹಂಕದ ಸಂತೋಷ ನಗರದಲ್ಲಿ ವಾಸವಿದ್ದ ನೈಜೀರಿಯಾ ಪ್ರಜೆ ಅಳದೆ ಅಬ್ದುಲ್ಲಾ ಯೂಸುಫ್ (26) ಬಂಧಿತರು.

‘ಆರೋಪಿ ಇಸ್ಮಾಯಿಲ್ ಖಾದ್ರಿ ಸಿಮ್‌ ಕಾರ್ಡ್‌ ವ್ಯಾಪಾರಿ. ಈತ ಅಬ್ದುಲ್ಲಾ ಯೂಸುಫ್‌ಗೆ 10ಕ್ಕೂ ಹೆಚ್ಚು ಬ್ಯಾಂಕ್‌ ಖಾತೆಗಳನ್ನು ತಲಾ ₹10 ಸಾವಿರಕ್ಕೆ ಮಾರಾಟ ಮಾಡಿದ್ದ. ನಕಲಿ ಸಿಮ್‌ ಕಾರ್ಡ್‌ಗಳನ್ನೂ ಕೊಡಿಸಿದ್ದ’.

ADVERTISEMENT

‘ಇವುಗಳನ್ನು ಉಪಯೋಗಿಸಿಕೊಂಡು ಯೂಸುಫ್‌ ಜನರನ್ನು ವಾಟ್ಸ್‌ಆ್ಯಪ್‌ ಮೂಲಕ ಸಂಪರ್ಕಿಸುತ್ತಿದ್ದ. ನಕಲಿ ವೆಬ್‌ಸೈಟ್‌ಗಳನ್ನು ತೆರೆದು, ಔಷಧ ಪೂರೈಸುವವರು ಹಾಗೂ ಮೆಡಿಕಲ್ ಶಾಪ್‌ ಹೊಂದಿರುವುದಾಗಿ ಬೇರೆ ಹೆಸರುಗಳಿಂದ ಪರಿಚಯಿಸಿಕೊಳ್ಳುತ್ತಿದ್ದ’ ಎಂದು ಪೊಲೀಸರು ಮಾಹಿತಿ ನೀಡಿದರು.

‘ರೆಮ್‌ಡಿಸಿವಿರ್ ಚುಚ್ಚುಮದ್ದು ಹಾಗೂ ಕೋವಿಡ್ ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮಾತ್ರೆ ಹಾಗೂ ಇನ್ನಿತರ ಔಷಧಗಳನ್ನು ಮಾರಾಟ ಮಾಡುವುದಾಗಿ ಜನರನ್ನು ನಂಬಿಸುತ್ತಿದ್ದ. ಔಷಧ ಸಿಗುವುದಾಗಿ ಜನ ಈತನ ನಕಲಿ ಖಾತೆಗಳಿಗೆ ಭಾರಿ ಹಣ ಜಮಾ ಮಾಡುತ್ತಿದ್ದರು. ಇದಾದ ಬಳಿಕ ಯಾವುದೇ ಔಷಧ ನೀಡದೆ, ಜನರನ್ನು ವಂಚಿಸುತ್ತಿದ್ದರು’ ಎಂದು ವಿವರಿಸಿದರು.

‘ಆರೋಪಿಗಳಿಂದ 110 ಸಿಮ್‌ ಕಾರ್ಡ್‌ಗಳು, 10 ಬ್ಯಾಂಕ್‌ ಖಾತೆ ಸೇರಿದಂತೆ ₹4 ಲಕ್ಷ ಜಪ್ತಿ ಮಾಡಲಾಗಿದೆ. ಕೃತ್ಯಕ್ಕೆ ಬಳಸಿದ್ದ ನಾಲ್ಕು ಮೊಬೈಲ್, ಹಾರ್ಡ್‌ಡಿಸ್ಕ್‌ ವಶಕ್ಕೆ ಪಡೆಯಲಾಗಿದೆ’ ಎಂದೂ ಪೊಲೀಸರು ತಿಳಿಸಿದರು.

ನಾಲ್ಕು ಪ್ರಕರಣ ಪತ್ತೆ: ವಿಲ್ಸನ್‌ ಗಾರ್ಡನ್‌ ನಿವಾಸಿ ರಾಜ್ ಅಗರವಾಲ್ ಎಂಬುವರಿಗೆ ವಾಟ್ಸ್‌ಆ್ಯಪ್ ಮೂಲಕ ಪರಿಚಯವಾಗಿ ಔಷಧಕ್ಕಾಗಿ ₹36,588 ಮೊತ್ತವನ್ನು ಖಾತೆಗೆ ಹಾಕಿಸಿಕೊಂಡಿದ್ದರು. ಬೆಂಗಳೂರಿನ ಮುಜಾಹಿದ್ ಅಹ್ಮದ್‌ ಹಾಗೂ ಮಾರತ್ತಹಳ್ಳಿಯ ಕೃಷ್ಣನ್ ಕುಮಾರ್, ಬೀದರ್‌ನ ಚಂದ್ರಪ್ರಕಾಶ್ ಅವರಿಂದ ತಲಾ ₹85 ಸಾವಿರ ಪಡೆದು ವಂಚಿಸಿದ್ದರು. ಈ ಸಂಬಂಧ ಆಯಾ ಸೆನ್‌ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.