ADVERTISEMENT

ಬೆಂಗಳೂರು | ‘ಅನಧಿಕೃತ ಪೆಟ್ಟಿಗೆ ಅಂಗಡಿಗಳನ್ನು ತೆರವುಗೊಳಿಸಿ’: ರಮೇಶ್ ಡಿ.ಎಸ್

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2025, 15:54 IST
Last Updated 7 ಸೆಪ್ಟೆಂಬರ್ 2025, 15:54 IST
ಬೆಳ್ಳಂದೂರು ವಾರ್ಡ್‌ನ ಪಾದಚಾರಿ ಮಾರ್ಗದಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರೆವುಗೊಳಿಸಲಾಯಿತು. ರಮೇಶ್ ಡಿ.ಎಸ್. ಉಪಸ್ಥಿತರಿದ್ದರು
ಬೆಳ್ಳಂದೂರು ವಾರ್ಡ್‌ನ ಪಾದಚಾರಿ ಮಾರ್ಗದಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ತೆರೆವುಗೊಳಿಸಲಾಯಿತು. ರಮೇಶ್ ಡಿ.ಎಸ್. ಉಪಸ್ಥಿತರಿದ್ದರು   

ಬೆಂಗಳೂರು: ‘ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಪಾದಚಾರಿ ಮಾರ್ಗಗಳಲ್ಲಿ ಅನಧಿಕೃತವಾಗಿ ಇರುವ ಪೆಟ್ಟಿಗೆ ಅಂಗಡಿಗಳನ್ನು ಮುಲಾಜಿಲ್ಲದೇ ತೆರವುಗೊಳಿಸಬೇಕು’ ಎಂದು ಆಯುಕ್ತ ರಮೇಶ್ ಡಿ.ಎಸ್ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಬೆಳ್ಳಂದೂರು ವಾರ್ಡ್‌ ವ್ಯಾಪ್ತಿಯ ವಿವಿಧ ಸ್ಥಳಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ವಿಪ್ರೊ ಬಳಿಯ ಪಾದಚಾರಿ ಮಾರ್ಗದಲ್ಲಿದ್ದ ಪೆಟ್ಟಿಗೆ ಅಂಗಡಿಗಳನ್ನು ಗಮನಿಸಿದ ಅವರು, ಅವುಗಳನ್ನು ಕೂಡಲೇ ಜೆಸಿಬಿಯ ಮೂಲಕ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು. ‘ಪಾದಚಾರಿ ಮಾರ್ಗದಲ್ಲಿ ಅನಧಿಕೃತವಾಗಿ ಮತ್ತೆ ಪೆಟ್ಟಿಗೆ ಅಂಗಡಿಗಳನ್ನು ಇಟ್ಟುಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ಆಟೊ, ಟಿಪ್ಪರ್, ಮಸ್ಟರಿಂಗ್ ಕೇಂದ್ರಕ್ಕೆ ತೆರಳಿ ಪರಿಶೀಲಿಸಿದರು. ನಂತರ ಅಪಾರ್ಟ್‌ಮೆಂಟ್‌ಗಳಿಂದ ತ್ಯಾಜ್ಯ ಸಂಗ್ರಹಿಸುವ ಪ್ರಕ್ರಿಯೆಯನ್ನೂ ಪರಿಶೀಲಿಸಿದರು.

ADVERTISEMENT

ನಂತರ ಪಾಕಶಾಲ ಹೋಟೆಲ್‌ನಲ್ಲಿರುವ ಅಡುಗೆ ಕೋಣೆಗೆ ಭೇಟಿನೀಡಿದರು. ಸ್ವಚ್ಛತೆ ಇಲ್ಲದಿರುವುದನ್ನು ಗಮನಿಸಿ, ಹೋಟೆಲ್ ಮಾಲೀಕರಿಗೆ ₹ 25 ಸಾವಿರ ದಂಡ ವಿಧಿಸಿದರು. ಮತ್ತೆ ಈ ರೀತಿ ಆಗದಂತೆ ಎಚ್ಚರಿಕೆ ವಹಿಸುವಂತೆ ತಾಕೀತು ಮಾಡಿದರು.

‘ಘನತ್ಯಾಜ್ಯ ವರ್ಗಾವಣೆ ಘಟಕ ಯಶಸ್ವಿ ಕಾರ್ಯನಿರ್ವಹಣೆ’:

ದಕ್ಷಿಣ ನಗರ ಪಾಲಿಕೆ ವ್ಯಾಪ್ತಿಯ ಈಜೀಪುರ ದ್ವಿತೀಯ ಹಂತದ ಘನತ್ಯಾಜ್ಯ ವರ್ಗಾವಣೆ ಘಟಕ ಯಶಸ್ವಿಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ’ ಎಂದು ಆಯುಕ್ತ ಕೆ.ಎನ್. ರಮೇಶ್ ತಿಳಿಸಿದರು.

ಈಜೀಪುರದಲ್ಲಿರುವ ದ್ವಿತೀಯ ಹಂತದ ಘನತ್ಯಾಜ್ಯ ಘಟಕ ಹಾಗೂ ಸ್ವಯಂ ಚಾಲಿತ ತ್ಯಾಜ್ಯ ವಿಂಗಡಣೆ ಘಟಕಕ್ಕೆ ಭಾನುವಾರ ಭೇಟಿ ನೀಡಿ ಘಟಕದ ಕಾರ್ಯವೈಖರಿಯನ್ನು ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. 

‘2024ರ ಮಾರ್ಚ್‌ನಿಂದ ಈ ಘಟಕ ಕಾರ್ಯನಿರ್ವಹಿಸುತ್ತಿದ್ದು ಪ್ರತಿನಿತ್ಯ ಎಂಟು ವಾರ್ಡ್‌ಗಳಿಂದ 160ರಿಂದ 170 ಟನ್ ತ್ಯಾಜ್ಯ ಬರುತ್ತದೆ. ಘಟಕದಲ್ಲಿ 35 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದು ಇದನ್ನು ತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕ್ಯಾಪ್ಸೂಲ್‌ಗಳ ಮೂಲಕ ರವಾನಿಸಲಾಗುತ್ತದೆ’ ಎಂದು ಮಾಹಿತಿ ನೀಡಿದರು. 

ಏಳು ‘ಕ್ಯಾಪ್ಸೂಲ್' ವಾಹನಗಳ ಬಳಕೆ:

ಘಟಕದಲ್ಲಿ ಏಳು ಕ್ಯಾಪ್ಸೂಲ್ ವಾಹನಗಳು ಕಾರ್ಯನಿರ್ವಹಿಸುತ್ತಿದ್ದು ಒಂದು ಕ್ಯಾಪ್ಸೂಲ್ ವಾಹನಕ್ಕೆ ಎರಡು ಕ್ಯಾಪ್ಸೂಲ್ (ಕಂಟೈನರ್) ಇರಲಿವೆ. ವಾರ್ಡ್‌ಗಳಿಂದ ಆಟೊ ಟಿಪ್ಪರ್‌ಗಳ ಮೂಲಕ ಬರುವ ತ್ಯಾಜ್ಯವನ್ನು ಕಂಪ್ರೆಸ್ ಮಾಡಿ ತುಂಬುವುದರಿಂದ ಒಂದು ಕ್ಯಾಪ್ಸೂಲ್‌ನಲ್ಲಿ 16 ಟನ್‌ನಿಂದ 18 ಟನ್‌ವರೆಗೆ ತ್ಯಾಜ್ಯ ಸಂಗ್ರಹಿಸಬಹುದು’ ಎಂದರು. ‘ಇದೇ ಸ್ಥಳದಲ್ಲಿರುವ ಸ್ವಯಂಚಾಲಿತ ತ್ಯಾಜ್ಯ ವಿಂಗಡಣಾ ಘಟಕದವು ಪ್ರತಿ ಗಂಟೆಗೆ 5 ಟನ್ ತ್ಯಾಜ್ಯದಂತೆ ನಿತ್ಯ ಸುಮಾರು 40 ಟನ್ ತ್ಯಾಜ್ಯ ವಿಂಗಣೆ ಮಾಡುವ ಸಾಮರ್ಥ್ಯ ಹೊಂದಿದೆ. ಇದರಿಂದ ಭೂಭರ್ತಿ ಪ್ರದೇಶಗಳ ಮೇಲಿನ ಒತ್ತಡ ಕಡಿಮೆಯಾಗುತ್ತದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.