ADVERTISEMENT

ಅಕ್ರಮ ಟಿಡಿಆರ್‌ಸಿ 12 ಕಂಪನಿಗೆ ಮಾರಾಟ!

ಹೊರಮಾವು, ಟಿ.ಸಿ ಪಾಳ್ಯ ರಸ್ತೆ ವಿಸ್ತರಣೆ ಕರ್ಮಕಾಂಡ l ಎಸಿಬಿ ತನಿಖೆಯಿಂದ ಬಯಲಿಗೆ

ಹೊನಕೆರೆ ನಂಜುಂಡೇಗೌಡ
Published 1 ಮೇ 2020, 22:24 IST
Last Updated 1 ಮೇ 2020, 22:24 IST
   

ಬೆಂಗಳೂರು: ಇಲ್ಲಿನ ಹೊರಮಾವು ಹಾಗೂ ಟಿ.ಸಿ. ಪಾಳ್ಯ ರಸ್ತೆ ವಿಸ್ತರಣೆಗಾಗಿ ಸ್ವಾಧೀನಪಡಿಸಿಕೊಂಡ ಕೌದೇನಹಳ್ಳಿಯ ಸರ್ವೆ ನಂಬರ್‌ 132 ಜಮೀನಿಗೆ ಪರ್ಯಾಯವಾಗಿ ವಿತರಿಸಲಾಗಿರುವ ಅಭಿವೃದ್ಧಿ ಹಕ್ಕು ವರ್ಗಾವಣೆ ಪ್ರಮಾಣ ಪತ್ರಗಳನ್ನು (ಟಿಡಿಆರ್‌ಸಿ) ಕೆಲ ಮಧ್ಯವರ್ತಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿ ಮಾಲೀಕರು ₹27.60 ಕೋಟಿಗೆ 12 ಕಂಪನಿಗಳಿಗೆ ಮಾರಿದ್ದಾರೆ ಎಂಬ ಸಂಗತಿಯನ್ನು ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ತನಿಖೆ ಬಯಲಿಗೆಳೆದಿದೆ.

ಈ ಜಮೀನಿನ ಮೂಲ ಮಾಲೀಕರಾದ ರೇವಣ್ಣ ಅವರ ಮಕ್ಕಳಾದ ಮುನಿರಾಜಪ್ಪ ಮತ್ತಿತರರು 1989ರಲ್ಲೇ ನಿವೇಶನಗಳಾಗಿ ಪರಿವರ್ತಿಸಿ ಮಾರಾಟ ಮಾಡಿದ್ದಾರೆ. ಈ ಸಂಗತಿಯನ್ನು ಮರೆಮಾಚಿ ಕೆಲ ಮಧ್ಯವರ್ತಿಗಳು ಹಾಗೂ ರಿಯಲ್‌ ಎಸ್ಟೇಟ್‌ ಕಂಪನಿಯವರು ಜಮೀನಿನ ಮೂಲ ಮಾಲೀಕರಿಂದ ಟಿಡಿಆರ್‌ಸಿಗಾಗಿ ಅರ್ಜಿ ಹಾಕಿಸಿದ್ದರು. ಬಿಬಿಎಂಪಿ ಹಲವು ಅಧಿಕಾರಿಗಳು ಮತ್ತು ಬ್ರೋಕರ್‌ಗಳು ಶಾಮೀಲಾಗಿ ಅಕ್ರಮವಾಗಿ ಟಿಡಿಆರ್‌ಸಿ ವಿತರಿಸಿರುವುದು ಎಸಿಬಿ ತನಿಖೆ ದೃಢಪಡಿಸಿದೆ.

ಹೀಗೆ ಅಕ್ರಮವಾಗಿ ಪಡೆದ ಟಿಡಿಆರ್‌ಸಿ ಮಾರಾಟ ಮಾಡುವ ಸಂಬಂಧ ಜಮೀನಿನ ಮೂಲ ಮಾಲೀಕರು ಮತ್ತು ಬ್ರೋಕರ್‌ಗಳು 2014ರ ಫೆಬ್ರುವರಿ 12ರಂದು ಎರಡು ಪ್ರತ್ಯೇಕ ಸಾಮಾನ್ಯ ಅಧಿಕಾರ ವರ್ಗಾವಣೆ ಒಪ್ಪಂದ (ಜಿ‍ಪಿಎ) ಮಾಡಿಕೊಂಡಿದ್ದರು. ಮರುದಿನವೇ ರಿಯಲ್‌ ಎಸ್ಟೇಟ್‌ ಕಂಪನಿಯೊಂದರ ಜತೆ ಕ್ರಯ ಒಪ್ಪಂದವನ್ನೂ ಮಾಡಿಕೊಂಡಿದ್ದರು ಎನ್ನಲಾಗಿದೆ.

ADVERTISEMENT

ಈ ದಾಖಲೆ ಮುಖಾಂತರ ಜಮೀನಿನ ಮೂಲ ಮಾಲೀಕರಾದ ಮುನಿರಾಜಪ್ಪ ಮತ್ತು ಕುಟುಂಬದವರು ಟಿಡಿಆರ್‌ ಮಧ್ಯವರ್ತಿಗಳಿಂದ ₹2.70 ಕೋಟಿಯನ್ನು ಅಕ್ರಮವಾಗಿ ಪಡೆದಿದ್ದಾರೆ. ಬಳಿಕ ಬ್ರೋಕರ್‌ಗಳು ಜಮೀನಿನ ಮೂಲ ಮಾಲೀಕರನ್ನು ಬಿಬಿಎಂಪಿಯಲ್ಲಿ ಪ್ರತಿನಿಧಿಸಿ, ಅಧಿಕಾರಿಗಳ ಜತೆ ಶಾಮೀಲಾಗಿ ಅಕ್ರಮ ದಾಖಲೆ ಸೃಷ್ಟಿಸಿದ್ದಾರೆ. ರಸ್ತೆ ವಿಸ್ತರಣೆಗೆ ಒಳಪಡುವ ಜಮೀನು ಹಾಗೂ ಸಂಬಂಧಪಡದ ಸ್ವತ್ತು ಹಾಗೂ ಕಟ್ಟಡಗಳಿಗೂ ಟಿಡಿಆರ್‌ಸಿ ಪಡೆಯುವ ಉದ್ದೇಶದಿಂದ 2014ರ ಮಾರ್ಚ್‌ 6 ಮತ್ತು ಮಾರ್ಚ್‌ 10ರಂದು ಎರಡು ಹಕ್ಕು ಬಿಡುಗಡೆ ಪತ್ರ ಮಾಡಿಕೊಟ್ಟಿರುತ್ತಾರೆ.

ಪ್ರತಿಯಾಗಿ ಬಿಬಿಎಂಪಿ ಅಧಿಕಾರಿಗಳು 2014ರ ಏಪ್ರಿಲ್‌ 1ರಂದು ಮುನಿರಾಜಪ್ಪ ಮತ್ತು ಕುಟುಂಬದವರಿಗೆ ಟಿಡಿಆರ್‌ಸಿ (002924 ಮತ್ತು 002958) ವಿತರಣೆ ಮಾಡಿದ್ದಾರೆ. ಟಿಡಿಆರ್‌ಸಿ ಬ್ರೋಕರ್‌ಗಳು ಇವೆರಡೂ ಟಿಡಿಆರ್‌ಸಿ ವಿಸ್ತೀರ್ಣವನ್ನು ಬೇರೆ ಬೇರೆ ದಿನಾಂಕಗಳಂದು ₹ 27.60 ಕೋಟಿಗೆ ಒಟ್ಟು 12 ವ್ಯಕ್ತಿಗಳು ಮತ್ತು ರಿಯಲ್‌ ಎಸ್ಟೇಟ್‌ ಕಂಪನಿಗಳಿಗೆ ಮಾರಿದ್ದಾರೆ ಎಂದು ಎಸಿಬಿ ತನಿಖಾಧಿಕಾರಿಗಳು ದೂರಿದ್ದಾರೆ.

ಈ ಅಕ್ರಮ ವ್ಯವಹಾರದಲ್ಲಿ ಬಿಬಿಎಂಪಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಕೃಷ್ಣಲಾಲ್‌ ಮತ್ತಿತರ ಅಧಿಕಾರಿಗಳು ಪ್ರಮುಖ ಪಾತ್ರ ವಹಿಸಿದ್ದಾರೆ. ಈ ವ್ಯವಹಾರ ಮುಚ್ಚಿಹಾಕಲು ಟಿಡಿಆರ್‌ಸಿ 002958 ಸಂಖ್ಯೆ ಮೂಲ ಕಡತವನ್ನು ಕೃಷ್ಣಲಾಲ್‌ ತಮ್ಮ ವರ್ಗಾವಣೆ ಸಮಯದಲ್ಲಿ ಹಸ್ತಾಂತರಿಸಿಲ್ಲ. ಅಲ್ಲದೆ, ಈ ದಾಖಲೆ ಬಿಬಿಎಂಪಿ ಕಚೇರಿಯಲ್ಲಿ ಸಿಗದಂತೆ ನಾಶಪಡಿಸಿದ್ದಾರೆ ಎಂಬ ಸಂಗತಿ ಎಸಿಬಿ ತನಿಖೆಯಲ್ಲಿ ಸಾಬೀತಾಗಿದೆ.

ಇದರಿಂದ ಸರ್ವೆ ನಂಬರ್‌ 132ರಲ್ಲಿ ನಿವೇಶಗಳನ್ನು ಖರೀದಿಸಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿರುವ ನಾಗರಿಕರು ಹಾಗೂ ಬಿಬಿಎಂಪಿಗೆ ಭಾರಿ ನಷ್ಟವಾಗಿದೆ. ಆರೋಪಿಗಳು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ, ವಂಚನೆ, ಕ್ರಿಮಿನಲ್‌ ಸಂಚು ಮುಂತಾದ ಐಪಿಸಿ ಕಲಂಗಳಡಿ ಅಪರಾಧ ಎಸಗಿರುವುದು ಸಾಬೀತಾಗಿದೆ ಎಂದು ಎಸಿಬಿ ಹೇಳಿದೆ.

ಅಕ್ರಮವಾಗಿ ವಿತರಿಸಿರುವ ಟಿಡಿಆರ್‌ಸಿ ರದ್ದುಪಡಿಸುವಂತೆ ಬಿಬಿಎಂಪಿ ಕಮಿಷನರ್‌ಗೆ ಪತ್ರ ಬರೆಯಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ. ಈಗ ಚೆಂಡು ಪಾಲಿಕೆ ಅಂಗಳದಲ್ಲಿದೆ. ಟಿಡಿಆರ್‌ಸಿ ವಂಚನೆ ಪ್ರಕರಣ ಸಂಬಂಧ ಈಗಾಗಲೇ ಕೃಷ್ಣಲಾಲ್‌ ಸೇರಿದಂತೆ ಅನೇಕರು ಬಂಧಿತರಾಗಿ ಜಾಮೀನು ಪಡೆದು ಹೊರಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.