ADVERTISEMENT

ಜಕ್ಕನಹಳ್ಳಿಯಲ್ಲಿ ರಾಗಿ, ತೊಗರಿ ಬೆಳೆ ಕ್ಷೇತ್ರೋತ್ಸವ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 20:09 IST
Last Updated 25 ನವೆಂಬರ್ 2020, 20:09 IST
ರಾಗಿ ಹೊಲ ಪರಿಶೀಲಿಸಿದ ಕೃಷಿ ಅಧಿಕಾರಿಗಳು
ರಾಗಿ ಹೊಲ ಪರಿಶೀಲಿಸಿದ ಕೃಷಿ ಅಧಿಕಾರಿಗಳು   

ದಾಬಸ್ ಪೇಟೆ: ’ಅಲ್ಪ ಅವಧಿಯಲ್ಲಿ ಹೆಚ್ಚು ಇಳುವರಿ ಬರುವಂತಹ ತಳಿಗಳು ಇದ್ದು, ರೈತರು ಅಂತಹ ತಳಿಗಳನ್ನು ಬಿತ್ತನೆ ಮಾಡುವ ಮೂಲಕ ಹೆಚ್ಚು ಲಾಭ ಪಡೆಯಬಹುದು‘ ಎಂದು ನೆಲಮಂಗಲ ತಾಲ್ಲೂಕು ಕೃಷಿ ಸಹಾಯಕ ನಿರ್ದೇಶಕ ಡಾ. ರಾಘವೇಂದ್ರ ತಿಳಿಸಿದರು.

ತಾಲ್ಲೂಕು ಕೃಷಿ ಇಲಾಖೆಯ ಸಹಯೋಗದಲ್ಲಿ ತ್ಯಾಮಗೊಂಡ್ಲು ರೈತ ಸಂಪರ್ಕ ಕೇಂದ್ರದಿಂದ ಜಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ಏರ್ಪಡಿಸಿದ್ದ ’ರಾಗಿ ಹಾಗೂ ತೊಗರಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮ’ದಲ್ಲಿ ಮಾತನಾಡಿದರು.

’ಹಿಂದೆ ರಾಗಿಯಲ್ಲಿ ಹೆಚ್ಚು ಇಳುವರಿ ಬರುತ್ತಿರಲಿಲ್ಲ. ಇವತ್ತು ಹೆಚ್ಚಿನ ಇಳುವರಿ ಬರುವ ಬಿತ್ತನೆ ಬೀಜದ ತಳಿಗಳಿವೆ. ಅದರಲ್ಲೂ ಕಡಿಮೆ ಅವಧಿಯಲ್ಲಿ ಹೆಚ್ಚು ಇಳುವರಿ ಬರುವ ಹೊಸ ಹೊಸ ರಾಗಿ ತಳಿಗಳಿದ್ದು, ಒಂದು ಎಕರೆಗೆ 12ರಿಂದ 15 ಕ್ವಿಂಟಲ್ ವರೆಗೆ ರಾಗಿ ಬೆಳೆಯಬಹುದು‘ ಎಂದರು.

ADVERTISEMENT

ರೇಷ್ಮೆ ಇಲಾಖೆಯ ಶ್ರೀನಿವಾಸ ಮೂರ್ತಿ, ’ರೈತರು ಸಮಗ್ರ ಕೃಷಿಯನ್ನು ಅಳವಡಿಸಿಕೊಳ್ಳಬೇಕು. ಏಕಮುಖ ಬೆಳೆಗೆ ಜೋತು ಬೀಳದೆ, ವಿವಿಧ ಬೆಳೆಗಳನ್ನು ಬೆಳೆಯುವುದ್ನು ಅಳವಡಿಸಿಕೊಂಡಾಗ ಆರ್ಥಿಕವಾಗಿ ಸಬಲರಾಗುತ್ತಾರೆ‘ ಎಂದರು. ರೇಷ್ಮೆ ಇಲಾಖೆಯಿಂದ ರೈತರಿಗೆ ಸಿಗುವಂತಹ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.

ತ್ಯಾಮಗೊಂಡ್ಲು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಅಂಜನಾ, ’ಕೃಷಿ ಇಲಾಖೆಯಿಂದ ಬಿತ್ತನೆ ಬೀಜ, ಗೊಬ್ಬರ, ಔಷಧಿ ಹಾಗೂ ಯಂತ್ರೋಪಕರಣಗಳ ಸೌಲಭ್ಯಗಳನ್ನು ‌ರಿಯಾಯಿತಿ ದರದಲ್ಲಿ ರೈತರಿಗೆ ಒದಗಿಸಲಾಗುತ್ತದೆ. ರೈತರು ಬಳಸಿಕೊಳ್ಳಬೇಕು‘ ಎಂದರು.

ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ಸಿದ್ದಪ್ಪ ಮತ್ತು ಪ್ರಗತಿಪರ ರೈತರಾದ ಜಕ್ಕನಹಳ್ಳಿಯ ಭಾಸ್ಕರ್‌, ನಾಗೇಶ್, ಶ್ರೀನಿವಾಸ ಮೂರ್ತಿ ಅನಿಸಿಕೆಗಳನ್ನು ಹಂಚಿಕೊಂಡರು.

ಸಹಾಯಕ ಕೃಷಿ ಅಧಿಕಾರಿ ಶಿವಕುಮಾರ್‌, ರಂಜಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.