ADVERTISEMENT

ಐಎಂಎ ಪ್ರಕರಣ: ಆಡಿಯೊ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:56 IST
Last Updated 19 ಜೂನ್ 2019, 19:56 IST
   

ಬೆಂಗಳೂರು: ‘ಐಎಂಎ ಸಮೂಹ ಕಂಪನಿ‘ ಮಾಲೀಕ ಮನ್ಸೂರ್ ಖಾನ್‌ನದ್ದು ಎನ್ನಲಾದ ಆಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಿರುವ ಎಸ್ಐಟಿ ಅಧಿಕಾರಿಗಳು, ಅದರಲ್ಲಿ ಹೆಸರಿರುವ ಪ್ರಭಾವಿಗಳನ್ನು ಸದ್ಯದಲ್ಲೇ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ.

ಶಿವಾಜಿನಗರದ ಲೇಡಿ ಕರ್ಜನ್‌ ರಸ್ತೆಯಲ್ಲಿರುವ ಕಂಪನಿಯ ಪ್ರಧಾನ ಕಚೇರಿಗೆರಂಜಾನ್ ಹಬ್ಬದ ನಿಮಿತ್ತ ಜೂನ್ 5ರಿಂದ 9ರವರೆಗೆ ರಜೆ ನೀಡಲಾಗಿತ್ತು. ‘ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂಬುದಾಗಿ ಮನ್ಸೂರ್ ಖಾನ್‌ ಹೆಸರಿನಲ್ಲಿ ಜೂನ್ 9ರ ರಾತ್ರಿ ಆಡಿಯೊ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡಿತ್ತು.

ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಳ್ಳುತ್ತಿದ್ದಂತೆ ಎಸ್‌ಐಟಿ ಅಧಿಕಾರಿಗಳು, ಆ ಆಡಿಯೊವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಸದ್ಯದಲ್ಲೇ ಅದರ ವರದಿ ಬರಲಿದ್ದು, ಆ ಆಡಿಯೊ ಅಸಲಿ ಎಂಬುದು ಗೊತ್ತಾದರೆ ಪ್ರಭಾವಿಗಳ ವಿಚಾರಣೆ ಶುರುವಾಗಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪ್ರಕರಣ ಸಂಬಂಧ ಏಳು ನಿರ್ದೇಶಕರನ್ನು ಬಂಧಿಸಿ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಯಾರ‍್ಯಾರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬುದರ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಕಾನೂನು ತಜ್ಞರ ನೆರವು ಪಡೆದು ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಎಸ್ಐಟಿ ಮೂಲಗಳು ಹೇಳಿವೆ.

ಮೂರು ಅಂತಸ್ತಿನ ಕಟ್ಟಡ ಜಪ್ತಿ; ಶಿವಾಜಿನಗರದ ಬೌರಿಂಗ್ ಆಸ್ಪತ್ರೆ ರಸ್ತೆಯಲ್ಲಿರುವ ‘ಐಎಂಎ ಸಮೂಹ ಕಂಪನಿ’ಯ ಮೂರು ಅಂತಸ್ತಿನ ಕಟ್ಟಡವನ್ನು ಜಪ್ತಿ ಮಾಡಿರುವ ಎಸ್ಐಟಿ ಅಧಿಕಾರಿಗಳು ಅದಕ್ಕೆ ಬೀಗ ಜಡಿದಿದೆ.

‘ಸಮದ್ ಹೌಸ್‌ ಪಕ್ಕದಲ್ಲೇ ಐಎಂಎ ಸಮೂಹ ಕಂಪನಿಯ ಕಟ್ಟಡವಿದೆ. ಮೊದಲ ಮಹಡಿಯಲ್ಲಿ ಬ್ಯಾಂಕ್, ಎರಡನೇ ಮಹಡಿಯಲ್ಲಿ ದಿನಪತ್ರಿಕೆಯೊಂದರ ಕಚೇರಿ ಹಾಗೂ ಮೂರನೇ ಮಹಡಿಯಲ್ಲಿ ಕಂಪನಿ ಶಾಖಾ ಕಚೇರಿ ಇದೆ. ನ್ಯಾಯಾಲಯದ ಅನುಮತಿ ಪಡೆದು ಮೂರು ಕಚೇರಿಗಳಲ್ಲೂ ಪರಿಶೀಲನೆ ನಡೆಸಿ ಬೀಗ ಹಾಕಲಾಗಿದೆ’ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.