ADVERTISEMENT

ವಿಷಾಹಾರ ಸೇವಿಸಿ ಭಕ್ತರು ಮೃತ‍ಪಟ್ಟ ಪ್ರಕರಣ: ಇಮ್ಮಡಿ ಸ್ವಾಮೀಜಿಗೆ 1 ವರ್ಷ ಜಾಮೀನು

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2025, 23:49 IST
Last Updated 12 ನವೆಂಬರ್ 2025, 23:49 IST
<div class="paragraphs"><p>ನ್ಯಾಯಾಲಯ ತೀರ್ಪು</p></div>

ನ್ಯಾಯಾಲಯ ತೀರ್ಪು

   

ಬೆಂಗಳೂರು: ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಸುಲ್ವಡಿ ಗ್ರಾಮದ ಕಿಚ್ಚಗುತ್ತಿ ಮಾರಮ್ಮ ದೇಗುಲ ಕಟ್ಟಡದ ಶಂಕುಸ್ಥಾಪನೆ ವೇಳೆ ವಿನಿಯೋಗಿಸಿದ್ದ ಪ್ರಸಾದ ಸೇವಿಸಿ 17 ಭಕ್ತರು ಮೃತಪಟ್ಟು 119 ಜನ ಅಸ್ವಸ್ಥಗೊಂಡ ಪ್ರಕರಣದಲ್ಲಿ ಸಾಲೂರು ಮಠದ ಅಂದಿನ ಪೀಠಾಧ್ಯಕ್ಷ ಇಮ್ಮಡಿ ಮಹಾದೇವ ಸ್ವಾಮಿ ಅವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.

ಜಾಮೀನು ಕೋರಿ ಇಮ್ಮಡಿ ಮಹದೇವ ಸ್ವಾಮಿ ಅಲಿಯಾಸ್ ದೇವಣ್ಣ ಬುದ್ಧಿ ಅಲಿಯಾಸ್ ದೇವಣ್ಣ ಸ್ವಾಮೀಜಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ನ್ಯಾಯಮೂರ್ತಿ ಎಸ್. ರಾಚಯ್ಯ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ADVERTISEMENT

ವಿಚಾರಣೆ ವೇಳೆ ಸ್ವಾಮೀಜಿ ಪರ ಹಿರಿಯ ವಕೀಲ ಸಿ.ಎಚ್. ಹನುಮಂತರಾಯ ಹಾಗೂ ಬಿ. ಸಿದ್ದೇಶ್ವರ ಅವರು ಮಂಡಿಸಿದ ವಾದ ಮನ್ನಿಸಿದ ನ್ಯಾಯಪೀಠ, ‘ಅರ್ಜಿದಾರರಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಅಗತ್ಯವಿದೆ’ ಎಂಬ ಕಾರಣದಿಂದ ಒಂದು ವರ್ಷದ ಅವಧಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿತು.

ಪ್ರಕರಣವೇನು?: 2018ರ ಸಂಜೆ ಡಿಸೆಂಬರ್ 14ರಂದು ರಾಜಮ್ಮ ಎಂಬುವರ ದೂರನ್ನು ಆಧರಿಸಿ ಚಾಮರಾಜನಗರ ಜಿಲ್ಲೆಯ ರಾಂಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿತ್ತು.

ತನಿಖೆ ನಡೆಸಿದ್ದ ಪೊಲೀಸರು ಪ್ರಕರಣದಲ್ಲಿ ನಾಲ್ವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆ-1860ರ ಕಲಂ 118, 120 ಬಿ, 326, 307, 302 ಮತ್ತು 34 ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ದೌರ್ಜನ್ಯ ತಡೆ ಕಾಯ್ದೆಯ ಕಲಂ 3 (1)(2) (ವಿ) (ವಿಎ) ಅಡಿಯಲ್ಲಿ ವಿಚಾರಣಾ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಪ್ರಕರಣದ ಪ್ರಮುಖ ಆರೋಪಿ ಇಮ್ಮಡಿ ಮಹಾದೇವ ಸ್ವಾಮೀಜಿಯವರನ್ನು 2018ರ ಡಿಸೆಂಬರ್ 19ರಂದು ಬಂಧಿಸಲಾಗಿತ್ತು.