ದಿನೇಶ್ ಗುಂಡೂರಾವ್
ಬೆಂಗಳೂರು: ಆಯುಷ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ವೈದ್ಯರು ಹಾಗೂ ಸಿಬ್ಬಂದಿಯ ದೈನಂದಿನ ಹಾಜರಾತಿಗೆ ‘ಆನ್‌ಲೈನ್ ಇ–ಹಾಜರಾತಿ ವ್ಯವಸ್ಥೆ’ಯನ್ನು ಆರಂಭಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
ವಿಧಾನ ಪರಿಷತ್‌ನಲ್ಲಿ ಬಿಜೆಪಿಯ ಎಚ್.ಎಸ್. ಗೋಪಿನಾಥ್ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಆಯುಷ್ ಸಿಬ್ಬಂದಿ ಎಲ್ಲಿದ್ದರೂ ಅಲ್ಲಿಂದಲೇ ಇ–ಹಾಜರಾತಿ ನೀಡಬಹುದು. ಪ್ರಾಯೋಗಿಕವಾಗಿ ಇದು ಆರಂಭವಾಗಿದ್ದು, ಆಗಸ್ಟ್ 1ರಿಂದ ಕಡ್ಡಾಯವಾಗಲಿದೆ ಎಂದರು.
ಆಯುಷ್ ವೈದ್ಯಾಧಿಕಾರಿಗಳಲ್ಲಿ 226 ಹುದ್ದೆಗಳು ಖಾಲಿ ಇದ್ದು, ಅವುಗಳನ್ನು ಶೀಘ್ರ ಭರ್ತಿ ಮಾಡಲಾಗುತ್ತದೆ. ಯಾವ ಚಿಕಿತ್ಸಾಲಯಗಳಲ್ಲೂ ಔಷಧ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಚ್‌ಪಿವಿ ಲಸಿಕೆ: ಗರ್ಭಕಂಠದ ಕ್ಯಾನ್ಸರ್ ನಿಯಂತ್ರಣಕ್ಕೆ ಹೆಣ್ಣು ಮಕ್ಕಳಿಗೆ ಎಚ್‌ಪಿವಿ ಲಸಿಕೆ ನೀಡುವ ಅಭಿಯಾನ ಆರಂಭಿಸಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಎರಡು ವರ್ಷದ ಹಿಂದೆ ಈ ಅಭಿಯಾನ ಘೋಷಣೆಯಾಗಿದ್ದರೂ ಅನುಷ್ಠಾನವಾಗಿಲ್ಲ ಎಂದು ದಿನೇಶ್ ಗುಂಡೂರಾವ್ ಹೇಳಿದರು.
ಜೆಡಿಎಸ್‌ನ ಕೆ.ಎ. ತಿಪ್ಪೇಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಸಚಿವರು, 8.76 ಲಕ್ಷ ಮಹಿಳೆಯರಿಗೆ ತಪಾಸಣೆ ಮಾಡಲಾಗಿದ್ದು, 5473 ಗರ್ಭಕಂಠದ ಕ್ಯಾನ್ಸರ್ ದೃಢಪಟ್ಟಿವೆ. ಸ್ತನ ಕ್ಯಾನ್ಸರ್ 2,213, ಬಾಯಿ ಕ್ಯಾನ್ಸರ್ 5,787 ಮಹಿಳೆಯರಿಗೆ ದೃಢಪಟ್ಟಿದೆ. ಮನೆಮನೆಗೆ ಭೇಟಿ ನೀಡಿ, ಮಹಿಳೆಯರಿಗೆ ಎಲ್ಲ ರೀತಿಯ ಆರೋಗ್ಯ ತಪಾಸಣೆ ಮಾಡಲು ಉದ್ದೇಶಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.