ADVERTISEMENT

ಬಸ್‌ ನಿಲ್ದಾಣಗಳ ಶೌಚಾಲಯಗಳನ್ನು ಸರಿಪಡಿಸಿ: ಸಚಿವ ರಾಮಲಿಂಗಾರೆಡ್ಡಿ ಖಡಕ್ ಸೂಚನೆ

ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2025, 18:17 IST
Last Updated 17 ಆಗಸ್ಟ್ 2025, 18:17 IST
ಸಚಿವ ರಾಮಲಿಂಗಾರೆಡ್ಡಿ
ಸಚಿವ ರಾಮಲಿಂಗಾರೆಡ್ಡಿ   

ಬೆಂಗಳೂರು: ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣಗಳಲ್ಲಿ ಶೌಚಾಲಯಗಳ ಸ್ಚಚ್ಛತೆ ನಿರ್ವಹಣೆಗಾಗಿ ಟೆಂಡರ್‌ ಪಡೆದವರು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸದೇ ಇದ್ದರೆ ಕರಾರು ರದ್ದು ಮಾಡಿ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

‘ಮೈಸೂರು ರಸ್ತೆ ಸ್ಯಾಟಲೈಟ್‌ ಬಸ್‌ ನಿಲ್ದಾಣದಲ್ಲಿ ಟಿಕೆಟ್‌ ಪಡೆಯುವ ಕೌಂಟರ್‌ ಸಮೀಪವೇ ಪುರುಷರ ಶೌಚಾಲಯ ಇರುವುದರಿಂದ ಮಹಿಳೆಯರಿಗೆ ಉಂಟಾಗುತ್ತಿದ್ದ ಕಸಿವಿಸಿ ಬಗ್ಗೆ ಪ್ರಯಾಣಿಕೆಯೊಬ್ಬರು ನನ್ನ ಗಮನಕ್ಕೆ ತಂದರು. ಕೂಡಲೇ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಪ್ರಯಾಣಿಕರು ಗಮನಕ್ಕೆ ತರುವ ಮೊದಲೇ  ಮುಂಜಾಗ್ರತಾ ಮತ್ತು ಸಂವೇದನಾಶೀಲ ಕ್ರಮಗಳನ್ನು ಕೈಗೊಳ್ಳುವುದು ಅಧಿಕಾರಿಗಳ ಕರ್ತವ್ಯ’ ಎಂದು ತಿಳಿಸಿದ್ದಾರೆ.

ಸಾರಿಗೆ ಸಂಸ್ಥೆಗಳ ಬಸ್‌ ನಿಲ್ದಾಣಗಳಲ್ಲಿ ಇರುವ ಶೌಚಾಲಯಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಆಗಾಗ ದೂರುಗಳು ಬರುತ್ತಿವೆ. ನೈರ್ಮಲ್ಯ ಕಾಪಾಡುವಲ್ಲಿ ವಿಫಲವಾಗಿರುವ ಬಗ್ಗೆಯೇ ಹೆಚ್ಚು ದೂರುಗಳಿವೆ. ನಿಗದಿಪಡಿಸಿದ್ದಕ್ಕಿಂತ ಅಧಿಕ ದರ ವಸೂಲಿ ಮಾಡುತ್ತಿರುವ, ಇದನ್ನು ಪ್ರಶ್ನಿಸುವ ಸಾರ್ವಜನಿಕರೊಂದಿಗೆ ದುರ್ನಡತೆ ತೋರುವ ಬಗ್ಗೆಯೂ ದೂರುಗಳಿವೆ. ದೂರುಗಳಿಗೆ ಅವಕಾಶ ಇಲ್ಲದಂತೆ ಕಾರ್ಯನಿರ್ವಹಿಸಲು ಕ್ರಮ ವಹಿಸಬೇಕು ಎಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕೆಕೆಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.