ADVERTISEMENT

ಹಣ ಹೂಡಿಕೆ ಹೆಸರಿನಲ್ಲಿ ವಂಚನೆ; ದಂಪತಿ ವಿಚಾರಣೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2020, 4:24 IST
Last Updated 16 ಅಕ್ಟೋಬರ್ 2020, 4:24 IST
   

ಬೆಂಗಳೂರು: ಹೂಡಿಕೆ ಹೆಸರಿನಲ್ಲಿ ಸಾರ್ವಜನಿಕರಿಂದ ಹಣ ಸಂಗ್ರಹಿಸಿ ವಂಚಿಸಿದ ಆರೋಪದಡಿ ಮುರಳಿ ಕೃಷ್ಣನ್ ಹಾಗೂ ಅವರ ಪತ್ನಿ ಸುಮೀಜಾ ಎಂಬುವರನ್ನು ಪುಟ್ಟೇನಹಳ್ಳಿ ಪೊಲೀಸರು ಗುರುವಾರ ವಿಚಾರಣೆ ನಡೆಸಿದರು.

‘ವಂಚನೆ ಸಂಬಂಧ ಪ್ರಕರಣ ದಾಖಲಾಗಿದೆ. ಅದರ ಪರಿಶೀಲನೆ ನಡೆಸಲಾಗುತ್ತಿದ್ದು, ದಂಪತಿಯನ್ನು ವಿಚಾರಣೆ ಮಾಡಿ ಕಳುಹಿಸಲಾಗಿದೆ. ಶುಕ್ರವಾರ ಬೆಳಿಗ್ಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಲಾಗಿದೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ತಿಳಿಸಿದರು.

ಪ್ರಕರಣದ ವಿವರ: ‘ಹ್ಯಾಪಿ ಕಾ ಆರ್ಗ್ಯಾನಿಕ್ಸ್’ ಕಂಪನಿ ನಡೆಸುತ್ತಿದ್ದ ದಂಪತಿ, ‘ತಮ್ಮ ಕಂಪನಿಯ ಸೂಪರ್ ಮಾರ್ಕೆಟ್‌ಗಳ ಮೇಲೆ ಹಣ ಹೂಡಿಕೆ ಮಾಡಿದರೆ, ಹೆಚ್ಚಿನ ಲಾಭಾಂಶ ನೀಡುತ್ತೇವೆ’ ಎಂದು ಜಾಹೀರಾತು ನೀಡಿದ್ದರು. ಅದನ್ನು ನೋಡಿದ್ದ ಎಸ್ಜಿಎಸ್ ಲೇಔಟ್ ನಿವಾಸಿ ವಿಶ್ವನಾಥಮ್ ಪೆಡ್ಡಿ ಎಂಬುವವರು ₹ 50 ಲಕ್ಷ ಹಣ ಹೂಡಿಕೆ ಮಾಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

ADVERTISEMENT

‘ವಿಶ್ವನಾಥಮ್ ಅವರಿಗೆ ನಾಲ್ಕು ತಿಂಗಳು ಲಾಭಾಂಶ ನೀಡಿದ್ದ ದಂಪತಿ, ನಂತರ ಸ್ಥಗಿತಗೊಳಿಸಿದ್ದರು. ಅದನ್ನು ಪ್ರಶ್ನಿಸಿದ್ದಕ್ಕೆ, ಕಂಪನಿ ನಷ್ಟದಲ್ಲಿರುವುದಾಗಿ ಆರೋಪಿಗಳು ಹೇಳಿದ್ದರು. ₹ 50 ಲಕ್ಷ ವಾಪಸು ಕೇಳಿದಾಗ ದಂಪತಿ ಜೀವ ಬೆದರಿಕೆ ಹಾಕಿದ್ದರೆಂದು ವಿಶ್ವನಾಥಮ್ ಅವರು ಪುಟ್ಟೇನಹಳ್ಳಿ ಠಾಣೆಗೆ ದೂರು ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.