ಯಲಹಂಕ: ಬ್ಯಾಟರಾಯನಪುರ ಕ್ಷೇತ್ರದ ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಸೊಣ್ಣಪ್ಪನಹಳ್ಳಿಯಲ್ಲಿ ₹90 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಇಂದಿರಾ ಕ್ಯಾಂಟೀನ್ ಕಟ್ಟಡಕ್ಕೆ ಕಂದಾಯ ಸಚಿವ ಕೃಷ್ಣಬೈರೇಗೌಡ ಹಾಗೂ ಪೌರಾಡಳಿತ ಸಚಿವ ರಹೀಂಖಾನ್ ಚಾಲನೆ ನೀಡಿದರು.
ಕೃಷ್ಣಬೈರೇಗೌಡ ಮಾತನಾಡಿ, ‘ಈ ಭಾಗದಲ್ಲಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ಮುಖ್ಯರಸ್ತೆಯು ಹಾದುಹೋಗಿದ್ದು, ಹೆಚ್ಚಾಗಿ ಟ್ಯಾಕ್ಸಿ, ಲಾರಿ ಹಾಗೂ ಸರಕುಸಾಗಣೆ ವಾಹನಗಳ ಚಾಲಕರು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಅಲ್ಲದೆ ಬಡವರು ಮತ್ತು ಕೂಲಿಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿ ವಾಸಿಸುತ್ತಿದ್ದಾರೆ. ಈ ಭಾಗದ ಜನರ ಬಹಳ ದಿನಗಳ ಬೇಡಿಕೆಯಂತೆ ಇಂದಿರಾ ಕ್ಯಾಂಟೀನ್ ಆರಂಭಿಸಲಾಗಿದೆ’ ಎಂದರು.
ಸೊಣ್ಣಪ್ಪನಹಳ್ಳಿ ಮುಖ್ಯರಸ್ತೆಯಲ್ಲಿ ನಿರ್ಮಿಸಿರುವ ಸಾರ್ವಜನಿಕ ಶೌಚಾಲಯ, ಶಕ್ತಿನಗರದಲ್ಲಿ ಸಾರ್ವಜನಿಕ ಗ್ರಂಥಾಲಯ ಹಾಗೂ ಹುಣಸಮಾರನಹಳ್ಳಿ ಪುರಸಭೆ ವ್ಯಾಪ್ತಿಯ ಗ್ರಾಮಗಳಲ್ಲಿ ಕಸ ಸಂಗ್ರಹಣೆಗಾಗಿ ಸ್ವಚ್ಛತಾ ವಾಹನಗಳಿಗೆ ಚಾಲನೆ ನೀಡಲಾಯಿತು.
ತಹಶೀಲ್ದಾರ್ ಶ್ರೇಯಸ್.ಜಿ.ಎಸ್, ಹುಣಸಮಾರನಹಳ್ಳಿ ಪುರಸಭೆಯ ಮುಖ್ಯ ಅಧಿಕಾರಿ ಕಾಂತರಾಜು, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಅಶೋಕನ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಎಚ್.ಪಿ.ನಾರಾಯಣಸ್ವಾಮಿ, ಬಿ.ಎಂ.ನಾಗೇಶ್, ಸತ್ಯನಾರಾಯಣ, ಎಚ್.ಎಸ್.ದಯಾನಂದ, ಕಾಂಗ್ರೆಸ್ ಮುಖಂಡರಾದ ಎನ್.ಎನ್.ಶ್ರೀನಿವಾಸಯ್ಯ, ಎಂ.ಜಯಗೋಪಾಲಗೌಡ, ಎನ್.ಕೆ.ಮಹೇಶ್‌ಕುಮಾರ್, ಜೆ.ಶ್ರೀನಿವಾಸ, ಪಂಚಮಿ ಶ್ರೀನಿವಾಸ್, ಬಿ.ಆರ್.ಪ್ರವೀಣ್, ಬಿ.ಕೆ.ರವೀಂದ್ರನಾಥಗೌಡ, ಉತ್ತನಹಳ್ಳಿ ಜಯಕುಮಾರ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.