ADVERTISEMENT

ಬಿಬಿಎಂಪಿ ವ್ಯಾಪ್ತಿಗೆ ಸೇರಿದ 110 ಹಳ್ಳಿಗಳಲ್ಲಿ ಅರೆಬರೆ ಕಾಮಗಾರಿ

ರಸ್ತೆಗಳ ಮರು ನಿರ್ಮಾಣ ಕಾಮಗಾರಿಗೆ ಹಣದ ಕೊರತೆ

ವಿಜಯಕುಮಾರ್ ಎಸ್.ಕೆ.
Published 29 ಜನವರಿ 2021, 18:57 IST
Last Updated 29 ಜನವರಿ 2021, 18:57 IST
ಚಿಕ್ಕಸಂದ್ರದಲ್ಲಿ 110 ಹಳ್ಳಿ ಯೋಜನೆಯ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್
ಚಿಕ್ಕಸಂದ್ರದಲ್ಲಿ 110 ಹಳ್ಳಿ ಯೋಜನೆಯ ಕಾಮಗಾರಿ ನಡೆಯುತ್ತಿರುವುದು –ಪ್ರಜಾವಾಣಿ ಚಿತ್ರಗಳು/ಎಂ.ಎಸ್. ಮಂಜುನಾಥ್   

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಗೆ ಸೇರ್ಪಡೆಗೊಂಡ 110 ಹಳ್ಳಿಗಳ ಸ್ಥಿತಿ ಸುಧಾರಣೆಯಾಗಲಿದೆ ಎಂಬ ಕನಸು ಮತ್ತೆ ಮರೀಚಿಕೆಯಾಗುತ್ತಿದೆ. ಒಳಚರಂಡಿ ಮತ್ತು ಕಾವೇರಿ ನೀರಿನ ಸಂಪರ್ಕ ಕಲ್ಪಿಸಲು ಅಗೆದಿರುವ ರಸ್ತೆಗಳೂ ಡಾಂಬರು ಕಾಣಲಿವೆ ಎಂಬ ಕನಸು ಕನಸಾಗಿಯೇ ಉಳಿಯುವ ಲಕ್ಷಣಗಳು ದಟ್ಟವಾಗಿವೆ.

2007ರಲ್ಲಿ 7 ನಗರಸಭೆ, ಒಂದು ಪ‍ಟ್ಟಣ ಪಂಚಾಯಿತಿ ಮತ್ತು 110 ಹಳ್ಳಿಗಳು ಪಾಲಿಕೆ ವ್ಯಾಪ್ತಿಗೆ ಸೇರಿದವು. ಆ ಹಳ್ಳಿಗಳಿಗೆ ಒಳಚರಂಡಿ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸಿ ಸುಸಜ್ಜಿತ ರಸ್ತೆ ನಿರ್ಮಾಣ ಮಾಡುವ ಯೋಜನೆಯನ್ನು ಬಿಬಿಎಂಪಿ ಮತ್ತು ಜಲಮಂಡಳಿ ಜತೆಗೂಡಿ ಆರಂಭಿಸಿದವು.

ಕಾಮಗಾರಿ ಆರಂಭವಾದ ನಂತರ 110 ಹಳ್ಳಿಗಳಲ್ಲಿ ಬಹುತೇಕ ಎಲ್ಲ ರಸ್ತೆಗಳನ್ನು ಅಗೆಯಲಾಗಿದೆ. ಒಳಚರಂಡಿ ಸಂಪರ್ಕ ಕಲ್ಪಿಸುವ ಕಾಮಗಾರಿಯನ್ನು ಜಲಮಂಡಳಿ ವರ್ಷಗಟ್ಟಲೆ ನಿರ್ವಹಿಸಿದೆ. ಈ ಸಂದರ್ಭದಲ್ಲಿ ರಸ್ತೆಗಳೆಲ್ಲವೂ ಹಾಳಾಗಿ ಜನ ಪಡಿಪಾಟಲು ಅನುಭವಿಸುತ್ತಿದ್ದಾರೆ.

ADVERTISEMENT

ಒಳಚರಂಡಿ ಸಂಪರ್ಕ ಮತ್ತು ಕುಡಿಯುವ ನೀರಿನ ಸಂಪರ್ಕ ಕಲ್ಪಿಸುವ ಕಾಮಗಾರಿ ಬಹುತೇಕ ಪೂರ್ಣಗೊಳ್ಳುವ ಹಂತಕ್ಕೆ ತಲುಪಿದೆ. ಕಾಮಗಾರಿ ಮುಗಿದ ಬಳಿಕ ಅಗೆದಿದ್ದ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ, ಡಾಂಬರು ಹಾಕುವ ಕೆಲಸ ಇನ್ನಷ್ಟೇ ನಡೆಯಬೇಕಿದೆ.

ಆದರೆ, 110 ಹಳ್ಳಿಗಳಲ್ಲಿನ ಎಲ್ಲ ರಸ್ತೆಗಳು ಡಾಂಬರು ಕಾಣುವ ಕನಸು ಸದ್ಯಕ್ಕೆ ನನಸಾಗುವಂತೆ ಕಾಣಿಸುತ್ತಿಲ್ಲ. ರಸ್ತೆಗಳ ಪುನರ್ ನಿರ್ಮಾಣಕ್ಕೆ ಜಲಮಂಡಳಿ ಹಣ ಒದಗಿಸದೆ ಕೈ ಚೆಲ್ಲಿದೆ. ಹೀಗಾಗಿ, ಈ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಯಾವ ಹಣದಲ್ಲಿ ಎಂಬುದು ಬಿಬಿಎಂಪಿಗೆ ತಲೆನೋವಾಗಿದೆ.

110 ಹಳ್ಳಿ ವ್ಯಾಪ್ತಿಯ ಅಲ್ಲಲ್ಲಿ ಪ್ರಮುಖ ರಸ್ತೆಗಳನ್ನು ಶಾಸಕರ ಅನುದಾನ ಹಾಗೂ ಇತರ ಅನುದಾನದಿಂದ ಅಭಿವೃದ್ಧಿಪಡಿಸಲಾಗುತ್ತಿದೆ. ಉಳಿದ ರಸ್ತೆಗಳ ಪಾಡೇನು ಎಂಬುದು ಜನರ ಪ್ರಶ್ನೆ. ಶಾಸಕರ ಅನುದಾನ, ಪಾಲಿಕೆಯ ಅನುದಾನದಲ್ಲಿ ಕಾಮಗಾರಿ ನಿರ್ವಹಿಸುವುದು ಸದ್ಯಕ್ಕೆ ಕಷ್ಟ ಎನ್ನುತ್ತಾರೆ ಅಧಿಕಾರಿಗಳು.

‘ಜೆಡಿಎಸ್‌ ಮತ್ತು ಕಾಂಗ್ರೆಸ್ ಶಾಸಕರಿರುವ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ. ಇತ್ತ 110 ಹಳ್ಳಿಗಳ ಕಾಮಗಾರಿಯೂ ಪೂರ್ಣಗೊಳ್ಳುತ್ತಿಲ್ಲ. ಈ ಕ್ಷೇತ್ರಗಳ ಜನ ಯಾವ ಪಾಪ ಮಾಡಿದ್ದಾರೆ’ ಎಂಬುದು ಜನಪ್ರತಿನಿಧಿಗಳ ಪ್ರಶ್ನೆ.

ಜಲಮಂಡಳಿ ಕೈಚೆಲ್ಲಿರುವ ಕಾರಣ ರಸ್ತೆ ಅಭಿವೃದ್ಧಿಗೆ ₹200 ಕೋಟಿ ಅನುದಾನ ಕೋರಿ ರಾಜ್ಯ ಸರ್ಕಾರಕ್ಕೆ ಬಿಬಿಎಂಪಿ ಪ್ರಸ್ತಾವನೆ ಸಲ್ಲಿಸಿದೆ. ಸರ್ಕಾರದಿಂದ ಅನುದಾನ ಬಂದರೆ ಮಾತ್ರ ಇಲ್ಲಿ ಕಾಮಗಾರಿ ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಾರೆ.

ಸರ್ಕಾರಕ್ಕೆ ಪ್ರಸ್ತಾವನೆ

‘110 ಹಳ್ಳಿಗಳ ಎಲ್ಲ ಮುಖ್ಯ ರಸ್ತೆ ಮತ್ತು ಅಡ್ಡರಸ್ತೆಗಳನ್ನು ಪುನರ್ ನಿರ್ಮಾಣ ಮಾಡಲು ಅನುದಾನ ಕೋರಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ತಿಳಿಸಿದರು.

3,100 ಕಿಲೋ ಮೀಟರ್ ರಸ್ತೆ ಅಭಿವೃದ್ಧಿಯಾಗಬೇಕಿದೆ. ಜಲಮಂಡಳಿಯಿಂದ ಇದಕ್ಕೆ ಹಣ ಒದಗಿಸುತ್ತಿಲ್ಲ. ಹೀಗಾಗಿ ಸರ್ಕಾರಿಂದ ಅನುದಾನ ಕೇಳಲಾಗಿದೆ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಅನುದಾನಕ್ಕೆ ಆಗ್ರಹ

‘110 ಹಳ್ಳಿ ಯೋಜನೆ ಪರಿಪೂರ್ಣಗೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಮುಖ್ಯ ರಸ್ತೆಗಳನ್ನಷ್ಟೇ ಮರು ನಿರ್ಮಾಣ ಮಾಡಿಸುತ್ತಿದ್ದೇವೆ’ ಎಂದು ದಾಸರಹಳ್ಳಿ ಶಾಸಕ ಆರ್. ಮಂಜುನಾಥ್ ಹೇಳಿದರು.

’ಬಿಜೆಪಿ ಅಧಿಕಾರಕ್ಕೆ ಬಂದ ಕೂಡಲೇ ನಮ್ಮ ಕ್ಷೇತ್ರಕ್ಕೆ ನೀಡಿದ್ದ ಅನುದಾನ ವಾಪಸ್ ಪಡೆಯಲಾಗಿದೆ. ಅರ್ಧಕ್ಕೆ ನಿಲ್ಲುವ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು ಯಾರು‘ ಎಂದು ಪ್ರಶ್ನಿಸಿದ ಅವರು, ’ಎಲ್ಲ ರಸ್ತೆಗಳನ್ನೂ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರ ಅನುದಾನ ನೀಡಬೇಕು‘ ಎಂದು ಒತ್ತಾಯಿಸಿದರು.

ಅಂಕಿ–ಅಂಶ

110:ಬಿಬಿಎಂಪಿ ರಚೆನೆ ಮಾಡಿದಾಗ ಅದರ ವ್ಯಾಪ್ತಿಗೆ ಸೇರಿಸಿದ ಹಳ್ಳಿಗಳು

225 ಚದರ ಕಿ.ಮೀ.:110 ಹಳ್ಳಿಗಳ ವಿಸ್ತೀರ್ಣ

₹ 5,018 ಕೋಟಿ: ಕಾವೇರಿ ನೀರಿನ ಸಂಪರ್ಕ ಮತ್ತು ಒಳಚರಂಡಿ ವ್ಯವಸ್ಥೆ ಕಲ್ಪಿಸಲು ಮೀಸಲಿರಿಸಿದ್ದ ಅನುದಾನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.