ADVERTISEMENT

ಲಿಂಗತ್ವ ಅಲ್ಪಸಂಖ್ಯಾತರಿಗೆ ಸೌಲಭ್ಯ ಹೆಚ್ಚಾಗಲಿ: ಸಾಹಿತಿ ಕೆ.ಷರೀಫಾ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 15:56 IST
Last Updated 20 ನವೆಂಬರ್ 2025, 15:56 IST
<div class="paragraphs"><p>ನಗರದ ನಯನ ಸಭಾಂಗಣದಲ್ಲಿ ಗುರುವಾರ ‘ಒಂದೆಡೆಗೆ 12ನೇ ವರ್ಷದ ಸಂಭ್ರಮಾಚರಣೆ ಮತ್ತು ಅಕ್ಕೈ ಪದ್ಮಶಾಲಿ ಅವರ ‘ಯಾರು ಸೂಳೆಯರು?’ ಪುಸ್ತಕ ಜನಾರ್ಪಣೆ ಕಾರ್ಯಕ್ರಮ&nbsp;</p></div>

ನಗರದ ನಯನ ಸಭಾಂಗಣದಲ್ಲಿ ಗುರುವಾರ ‘ಒಂದೆಡೆಗೆ 12ನೇ ವರ್ಷದ ಸಂಭ್ರಮಾಚರಣೆ ಮತ್ತು ಅಕ್ಕೈ ಪದ್ಮಶಾಲಿ ಅವರ ‘ಯಾರು ಸೂಳೆಯರು?’ ಪುಸ್ತಕ ಜನಾರ್ಪಣೆ ಕಾರ್ಯಕ್ರಮ 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಲಿಂಗತ್ವ ಅಲ್ಪಸಂಖ್ಯಾತರಿಗೂ ರಾಜಕೀಯ ಮೀಸಲಾತಿ ನೀಡಬೇಕು. ಪ್ರತ್ಯೇಕ ಶೌಚಾಲಯದಂತಹ ಮೂಲಸೌರ್ಕಯಗಳನ್ನು ಒದಗಿಸಬೇಕು’ ಎಂದು ಸಾಹಿತಿ ಕೆ.ಷರೀಫಾ ಸಲಹೆ ನೀಡಿದರು.

ADVERTISEMENT

ಒಂದೆಡೆ ಸಂಸ್ಥೆ 12ನೇ ವರ್ಷದ ಸಂಭ್ರಮಾಚರಣೆಯ ಭಾಗವಾಗಿ ನಗರದ ಕನ್ನಡ ಭವನದಲ್ಲಿ ಗುರುವಾರ ಆಯೋಜಿಸಿದ್ದ ಸಮಾರಂಭದಲ್ಲಿ ಜನಾರ್ಪಣೆಗೊಂಡ ಅಕ್ಕೈ ಪದ್ಮಶಾಲಿ ಅವರ ‘ಯಾರು ಸೂಳೆಯರು? ಪುಸ್ತಕ ಕುರಿತು ಮಾತನಾಡಿದರು.

‘ಲಿಂಗತ್ವ ಅಲ್ಪಸಂಖ್ಯಾತರು ಸಮಾಜದಲ್ಲಿ ಎಲ್ಲರಂತೆ ಬದುಕುವ ಪ್ರಯತ್ನ ಮಾಡಿದರೂ ಅಡ್ಡಿ–ಆತಂಕ ಇದ್ದೇ ಇದೆ. ಹಲವರು ಸಾಮಾಜಿಕ, ಆರ್ಥಿಕ, ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅಂತಹವರಲ್ಲಿ ಶಕ್ತಿ ತುಂಬಲು ಸರ್ಕಾರ ಸೌಲಭ್ಯಗಳನ್ನು ನೀಡಬೇಕು’ ಎಂದು ತಿಳಿಸಿದರು.

‘ಅಕ್ಕೈ ಪದ್ಮಶಾಲಿ ಅವರು ಬರೆದಿರುವ ಈ ಪುಸ್ತಕದಲ್ಲಿ 18 ಘಟನೆಗಳಿವೆ. ಓದಿದಾಗ ಮೈ ಜುಮ್ಮೆನಿಸುತ್ತದೆ. ಲೈಂಗಿಕ ವೃತ್ತಿ ನಿರತ ಮಹಿಳೆಯರು ಅನುಭವಿಸುವ ಕಷ್ಟಗಳು, ಅವರನ್ನು ವಿಭಿನ್ನ ಹೆಸರಿನಿಂದ ಕರೆಯುವ ರೀತಿಯನ್ನು ಬರೆದಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎನ್‌.ಎಲ್‌.ಮುಕುಂದರಾಜ್‌ ಮಾತನಾಡಿ, ‘ನಮಗೆ ಮೊದಲು ಮನುಷ್ಯನ ಸಂಕಟಗಳು ಅರ್ಥವಾಗಬೇಕು. ಸಾಮಾಜಿಕ, ಆರ್ಥಿಕ ಕಾರಣಗಳಿಂದ ಬೇರೆ ಬೇರೆ ವೃತ್ತಿ ಆಯ್ಕೆ ಮಾಡಿಕೊಂಡವರೂ ನಮ್ಮಂತೆ ಮನುಷ್ಯರು ಎನ್ನುವ ಮನೋಭಾವ ಬೆಳೆಸಿಕೊಳ್ಳಬೇಕು. ಸೂಳೆಯರು ಎಂದು ಗುರುತಿಸಿಕೊಂಡ ಮಹಿಳೆಯರಿಗೆ ಶರಣರು ಶತಮಾನಗಳ ಹಿಂದೆಯೇ ಗೌರವ ನೀಡಿದ್ದಾರೆ’ ಎಂದು ತಿಳಿಸಿದರು.

ಕಲಾವಿದೆ ಎನ್‌.ಮಂಗಳಾ, ಲಿಂಗತ್ವ ಅಲ್ಪಸಂಖ್ಯಾತ ಹೋರಾಟಗಾರ್ತಿ ಮೋನಿಕಾ, ಅನಿತಾ ಕುಮಾರಿ, ಅನಿಲ್‌ಕುಮಾರ್‌, ಸುಮತಿ, ಲಕ್ಷ್ಮಮ್ಮ, ಚಂದ್ರು ಹಾಜರಿದ್ದರು. ನಂತರ ಪ್ರದರ್ಶನಗೊಂಡ ಹಸಿವು ಕನಸು ಭಾಗ–2 ನಾಟಕ ಗಮನ ಸೆಳೆಯಿತು.

ಬಿಳಿಮಲೆ ಹೇಳಿಕೆಗೆ ಸಮರ್ಥನೆ

ಲೇಖಕಿ ಅಕ್ಕೈ ಪದ್ಮಶಾಲಿ ಮಾತನಾಡಿ ‘ಯಕ್ಷಗಾನ ಕಲಾವಿದರಲ್ಲಿ ಬಹುತೇಕ ಜನ ಸಲಿಂಗಕಾಮಿಗಳು ಎಂಬ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರ ಹೇಳಿಕೆಯನ್ನು ನಾನು ಸಮರ್ಥಿಸುತ್ತೇನೆ. ಬರೀ ಯಕ್ಷಗಾನ ಅಷ್ಟೇ ಅಲ್ಲ; ಎಲ್ಲಾ ಕಲೆ ವಲಯಗಳಲ್ಲಿಯೂ ನಮ್ಮ ಜನರಿದ್ದಾರೆ. ನಮ್ಮ ಸಮುದಾಯ ಎಂದ ಕೂಡಲೇ ಅದು ಹೀನಾಯ ಕೀಳು ಎಂದು ಟೀಕಿಸುವುದು ಸರಿ ಇಲ್ಲ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.