ಬೆಂಗಳೂರು: ‘ನಮ್ಮ ಮೆಟ್ರೊದಲ್ಲಿ ಜನದಟ್ಟಣೆ ನಿವಾರಿಸಲು ರೈಲು ಟ್ರಿಪ್‌ಗಳನ್ನು ಹೆಚ್ಚಿಸಬೇಕು. ಅದಕ್ಕಾಗಿ ಕೋಚ್‌ಗಳ ಖರೀದಿಯನ್ನು ತ್ವರಿತಗೊಳಿಸಬೇಕು’ ಎಂದು ಬೆಂಗಳೂರು ಕೇಂದ್ರ ಸಂಸದ ಪಿ.ಸಿ. ಮೋಹನ್ ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸೋಮವಾರ ಸಂಜೆ ಅವರು ಮೆಟ್ರೊ ನೇರಳೆ ಮಾರ್ಗದಲ್ಲಿ ಕೆ.ಆರ್.ಪುರದಿಂದ ಮೆಜೆಸ್ಟಿಕ್‌ವರೆಗೆ ಪ್ರಯಾಣಿಸಿ, ಪ್ರಯಾಣಿಕರೊಂದಿಗೆ ಸಂವಹನ ನಡೆಸಿದ ಬಳಿಕ ಮಾತನಾಡಿದರು.
ಜನಸಂದಣಿಯನ್ನು ನಿರ್ವಹಿಸಲು, ಬೋರ್ಡಿಂಗ್ ಖಚಿತಪಡಿಸಿಕೊಳ್ಳಲು ಮತ್ತು ಪ್ರಯಾಣಿಕರ ಸುರಕ್ಷತೆ ಹೆಚ್ಚಿಸಲು ಜನದಟ್ಟಣೆ ಸಮಯದಲ್ಲಿ ಪ್ಲಾಟ್‌ಫಾರ್ಮ್‌ಗಳಲ್ಲಿ ಹೆಚ್ಚಿನ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಬೇಕು. ಹಿರಿಯರು, ಅಂಗವಿಕಲರು ಸೇರಿ ಎಲ್ಲ ಪ್ರಯಾಣಿಕರಿಗೆ ಅನುಕೂಲವಾಗುವಂತೆ ಪ್ಲಾಟ್‌ಫಾರ್ಮ್‌ನ ಉದ್ದಕ್ಕೂ ಆಸನಗಳನ್ನು ಅಳವಡಿಸಬೇಕು ಎಂದು ಸಲಹೆ ನೀಡಿದರು.
ಫೀಡರ್ ಬಸ್‌ಗಳನ್ನು ಹೆಚ್ಚಿಸಬೇಕು. ಕೊನೆಯ ಮೈಲಿ ಸಂಪರ್ಕಕ್ಕಾಗಿ ಮೀಟರ್ ಇರುವ ಆಟೊಗಳಿಗೆ ಅನುಮತಿ ನೀಡಬೇಕು. ಬಿಎಂಟಿಸಿಯಂತೆ ಮಾಸಿಕ ಪಾಸ್‌ಗಳನ್ನು, ರಿಯಾಯಿತಿ ಪಾಸ್‌ಗಳನ್ನು ಪರಿಚಯಿಸಬೇಕು. ಚಿಲ್ಲರೆ ವ್ಯಾಪಾರಿಗಳಿಗೆ ಸ್ಮಾರ್ಟ್ ಕಾರ್ಡ್, ಟಾಪ್ ಅಪ್ ಸೌಲಭ್ಯ ವಿಸ್ತರಿಸಬೇಕು. ಮೆಟ್ರೊದಲ್ಲಿ ಸೈಕಲ್ ಒಯ್ಯಲು ಅವಕಾಶ ನೀಡಬೇಕು ಎಂದು ಹೇಳಿದರು.
ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.