ಬೆಂಗಳೂರು: ಬೇರೆ ಬೇರೆ ವಲಯ, ವರ್ಗ, ಸಮುದಾಯದವರು ಬರೆಯುವ ಮೂಲಕ ಕನ್ನಡ ಸಾಹಿತ್ಯದ ಶಕ್ತಿ ಹೆಚ್ಚಿಸಿದ್ದಾರೆ. ಸಾಹಿತ್ಯಕ್ಕೆ ಮಹತ್ವ ತಂದುಕೊಟ್ಟಿದ್ದಾರೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಭಿಪ್ರಾಯಪಟ್ಟರು.
ನಗರದಲ್ಲಿ ಬುಧವಾರ ಹೂವಿನಹಡಗಲಿಯ ಏಳುಕೋಟಿ ಪ್ರಕಾಶನವು ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಗೌಡ್ರ ಶಿವಕುಮಾರಗೌಡ ಅವರ ‘ನಾ ಕಂಡ ಸಮಾಜ ಮತ್ತು ಸಮಸ್ಯೆಗಳು’ ಕೃತಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
‘ಬೇರೆ ಬೇರೆ ಸಮುದಾಯ, ವಲಯದವರು ಅದ್ಭುತವಾಗಿ ಬರೆಯುತ್ತಿದ್ದಾರೆ. ಆದರೆ ಯಾವ ಜಾತಿ, ಮತಕ್ಕೆ ಸೇರಿದ್ದಾರೆಂದು ತಿಳಿದುಕೊಂಡು ಮಾತನಾಡುತ್ತೇವೆ ಮತ್ತು ವರ್ತಿಸುತ್ತೇವೆ’ ಎಂದು ಬೇಸರ ವ್ಯಕ್ತಪಡಿಸಿದರು.
ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ ಮಾತನಾಡಿ, ‘ತರಕಾರಿ ಮಾರುವ, ಟಿ.ವಿ. ಹಾಗೂ ವಾಷಿಂಗ್ ಮಷಿನ್ ದುರಸ್ತಿಗೊಳಿಸುವ ಶಿವಕುಮಾರಗೌಡ ಅವರು ಶ್ರಮಜೀವಿಗಳಾಗಿದ್ದು, ಅವರ ಬರವಣಿಗೆಯೂ ಶ್ರಮಜೀವಿಗಳ ಕುರಿತೇ ಇದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾಹಿತಿ ಎಸ್.ಜಿ. ಸಿದ್ದರಾಮಯ್ಯ ಮಾತನಾಡಿ, ‘ನಮ್ಮ ರಾಜ್ಯವನ್ನು ಕುಂಕುಮ, ವಿಭೂತಿ ನುಂಗುತ್ತಿವೆ. ಲಾಂಛನಗಳ ಆಕ್ರಮಣಗಳು ನಡೆದಾಗ ನೋಡಿಕೊಂಡು ಸುಮ್ಮನಿರಲಾಗದು’ ಎಂದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಮಾತನಾಡಿ, ‘ಸಣ್ಣ ಸಣ್ಣ ಸಮುದಾಯಗಳು ನಿಧಾನವಾಗಿ ಸಾಯುತ್ತಿವೆ. ಅವುಗಳ ಭಾಷೆಯೂ ಸಾಯುತ್ತಿದೆ. ಮುಂದಿನ 60 ವರ್ಷಗಳಲ್ಲಿ ಶೇ 80ರಷ್ಟು ಭಾಷಿಕರು ಶೇ 20ರಷ್ಟು ಜನರ ಭಾಷೆಯನ್ನು ಬಳಸುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.
ಕಥೆಗಾರ ವಸುಧೇಂದ್ರ ಕೃತಿ ಪರಿಚಯಿಸಿದರು. ಲೇಖಕ ಗೌಡ್ರ ಶಿವಕುಮಾರಗೌಡ, ಪ್ರಕಾಶಕ ಲಕ್ಷ್ಮಣ್ ಈಟಿ, ಸಂಸದೀಯ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ನಿರ್ದೇಶಕ ಕ.ನಾ. ವಿಜಯಕುಮಾರ್ ಹಾಗೂ ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಮಂಜುನಾಥ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.