ಮೇ ದಿನಾಚರಣೆಯ ಪ್ರಯುಕ್ತ ಜೆಸಿಟಿಯು ನೇತೃತ್ವದಲ್ಲಿ ಗುರುವಾರ ಬೃಹತ್ ಮೆರವಣಿಗೆ ನಡೆಯಿತು
-ಪ್ರಜಾವಾಣಿ ಚಿತ್ರ
ಬೆಂಗಳೂರು: ಒಬ್ಬ ಕಾರ್ಮಿಕ ದಿನಕ್ಕೆ ಎಂಟು ಗಂಟೆ ಮಾತ್ರ ಕೆಲಸ ಮಾಡಬೇಕು ಎಂದು ಹೋರಾಟಕ್ಕಿಳಿದು ಕಾರ್ಮಿಕರು ಹುತಾತ್ಮರಾದ ದಿನವೇ ಮೇ ದಿನಾಚರಣೆ. ಇದರಿಂದ ಜಗತ್ತಿನಾದ್ಯಂತ 8 ಗಂಟೆ ದುಡಿಮೆಯ ಕಾನೂನಾಗಿದೆ. ಆದರೆ, ರಾಜ್ಯದಲ್ಲಿ ದುಡಿಮೆಯ ಅವಧಿಯನ್ನು ಹೆಚ್ಚಿಸುವ ಮೂಲಕ ಮೇ ದಿನಕ್ಕೇ ಅವಮಾನ ಮಾಡಲಾಗುತ್ತಿದೆ ಎಂದು ವಿವಿಧ ಕಾರ್ಮಿಕ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಜಂಟಿ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಜೆಸಿಟಿಯು) ಗುರುವಾರ ಮೇ ದಿನ ಆಚರಿಸಿತು.
ಗಾರ್ಮೆಂಟ್‌ಗಳಲ್ಲಿ 10 ಗಂಟೆ ದುಡಿಸುತ್ತಿದ್ದಾರೆ. ಒಪ್ಪದವರನ್ನು ಮನೆಗೆ ಕಳುಹಿಸುತ್ತಿದ್ದಾರೆ. ದುಡಿಮೆ ಅವಧಿಯನ್ನು 8 ಗಂಟೆಗೆ ಸೀಮಿತಗೊಳಿಸಬೇಕು. ಗುತ್ತಿಗೆ ಪದ್ಧತಿ ರದ್ದು ಮಾಡಬೇಕು ಎಂದು ಮುಖಂಡರು ಆಗ್ರಹಿಸಿದರು.
ಕಾರ್ಮಿಕರ ಕಲ್ಯಾಣಕ್ಕಾಗಿ 29 ಕಾಯ್ದೆಗಳಿದ್ದವು. ಅವುಗಳನ್ನು ನಾಲ್ಕು ಕೋಡ್‌ಗಳ ಒಳಗೆ ತಂದು ಹಲವನ್ನು ಬಿಟ್ಟು ಕಾಯ್ದೆಯನ್ನು ದುರ್ಬಲಗೊಳಿಸಲಾಗುತ್ತಿದೆ. ಈ ಕೋಡ್ ಪ್ರಕಾರ, ಕಾರ್ಮಿಕರು ಸಂಘಟನೆ ರಚಿಸಿಕೊಳ್ಳುವಂತಿಲ್ಲ. ದ್ವಿಪಕ್ಷೀಯ ಮಾತುಕತೆ ಇರುವುದಿಲ್ಲ. ಕಾರ್ಮಿಕರನ್ನು ಗುಲಾಮಗಿರಿಗೆ ತಳ್ಳುವ ‘ಲೇಬರ್ ಕೋಡ್’ ವಾಪಸ್ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಖಾಸಗೀಕರಣ ಮೂಲಕ ಕೇಂದ್ರ ಸರ್ಕಾರವು ಎಲ್ಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಕಳೆದುಕೊಳ್ಳುತ್ತಿದೆ. ಖಾಸಗೀಕರಣ ನಿಲ್ಲಿಸಬೇಕು. ಬೆಲೆ ಏರಿಕೆ ವಿಪರೀತವಾಗುತ್ತಿದ್ದು, ಅದಕ್ಕೆ ಸರಿಯಾಗಿ ವೇತನ ಹೆಚ್ಚಳವಾಗುತ್ತಿಲ್ಲ. ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಯೋಜನಾ ಕಾರ್ಯಕರ್ತರು ಎಂದು ಕರೆಯುವ ಮೂಲಕ ಶಾಸನಬದ್ಧ ಸೌಲಭ್ಯಗಳಿಂದ ಹೊರಗಿಡಲಾಗಿದೆ. ಅವರನ್ನೂ ಕಾರ್ಮಿಕರು ಎಂದು ಪರಿಗಣಿಸಬೇಕು ಎಂದು ಹೇಳಿದರು.
ಪುರಭವನದಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಸಾವಿರಾರು ಕಾರ್ಮಿಕರು ಮೆರವಣಿಗೆ ನಡೆಸಿದರು. ಮೇ ದಿನದ ಹುತಾತ್ಮರಿಗೆ, ಪಹಲ್ಗಾಮ್ ದಾಳಿಯಲ್ಲಿ ಹುತಾತ್ಮರಾದವರಿಗೆ ಸಂತಾಪ ಸೂಚಿಸಲಾಯಿತು.
ಜೆಸಿಟಿಯು ಸಂಚಾಲಕ ಕೆ.ವಿ. ಭಟ್, ಕಾರ್ಮಿಕ ಮುಖಂಡರಾದೆ ಶಾಮಣ್ಣ ರೆಡ್ಡಿ (ಇಂಟಕ್), ಸತ್ಯಾನಂದ (ಎಐಟಿಯುಸಿ), ಕೆ. ಪ್ರಕಾಶ್ (ಸಿಐಟಿಯು), ರಮಾ ಟಿ.ಸಿ. (ಎಐಯುಟಿಯುಸಿ), ಶಿವಶಂಕರ್ (ಟಿಯುಸಿಸಿ), ಕಾಳಪ್ಪ (ಎಚ್‌ಎಂಕೆಪಿ), ನಾಗನಾಥ (ಎಚ್‌ಎಂಎಸ್), ಕ್ರಿಪ್ಟನ್ ರೊಸಾರಿಯೊ (ಎಐಸಿಸಿಟಿಯು), ಗಂಗಣ್ಣ (ಕೆಐಇಇಎಫ್), ಪಿ.ಕೆ. ಸ್ವಾಮಿ (ಎನ್‌ಸಿಎಲ್) ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.