ADVERTISEMENT

₹ 55 ಲಕ್ಷ ವಂಚನೆ; 'ಇಂಡೇಲ್ ಮನಿ' ವ್ಯವಸ್ಥಾಪಕಿ ಪತ್ತೆಗೆ ವಾರೆಂಟ್

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 14:59 IST
Last Updated 11 ಫೆಬ್ರುವರಿ 2021, 14:59 IST
ಸುನಂದಾ
ಸುನಂದಾ   

ಬೆಂಗಳೂರು: ತಾವು ಕೆಲಸ ಮಾಡುತ್ತಿದ್ದ ಇಂಡೇಲ್ ಮನಿ ಕಂಪನಿಗೆ ₹ 55 ಲಕ್ಷ ವಂಚನೆ ಮಾಡಿ ತಲೆಮರೆಸಿಕೊಂಡಿರುವ ಹೊಂಗಸಂದ್ರ ಶಾಖೆಯ ವ್ಯವಸ್ಥಾಪಕಿ ಕೆ.ಓ. ಸುನಂದಾ ಎಂಬುವರ ಪತ್ತೆಗಾಗಿ ಹೈಕೋರ್ಟ್ ಜಾಮೀನು ಸಹಿತ ವಾರೆಂಟ್ ಜಾರಿ ಮಾಡಿದೆ.

ವಂಚನೆ ಸಂಬಂಧ ಕಂಪನಿಯ ಸಹಾಯಕ ವ್ಯವಸ್ಥಾಪಕ ಬಿ.ಎಸ್. ಪ್ರದೀಪ್ ಎಂಬುವರು 2020ರ ಮಾರ್ಚ್ 17ರಂದು ಬೇಗೂರು ಠಾಣೆಗೆ ದೂರು ನೀಡಿದ್ದರು. ದೂರು ದಾಖಲಾದಾಗಿನಿಂದಲೂ ತಲೆಮರೆಸಿಕೊಂಡಿರುವ ಆರೋಪಿ, ನಿರೀಕ್ಷಣಾ ಜಾಮೀನು ಕೋರಿ ವಕೀಲರ ಮೂಲಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನೂ ನ್ಯಾಯಾಲಯ ವಜಾ ಮಾಡಿತ್ತು. ಅದಾದ ನಂತರ, ಪ್ರಕರಣದ ವಿಚಾರಣೆಗೂ ಸುನಂದಾ ಹಾಜರಾಗಿಲ್ಲ.

ಪ್ರಕರಣ ಸಂಬಂಧ ದೂರುದಾರರು, ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅಲ್ಲಿಯೂ ವಿಚಾರಣೆಗೆ ಸುನಂದಾ, ಪದೇ ಪದೇ ಗೈರಾಗುತ್ತಿದ್ದಾರೆ. ಹೀಗಾಗಿ, ಅವರ ಪತ್ತೆಗಾಗಿ ಹೈಕೋರ್ಟ್ ವಾರೆಂಟ್ ಜಾರಿ ಮಾಡಿದೆ. ಬೇಗೂರು ಠಾಣೆ ಪೊಲೀಸರು, ಸುನಂದಾ ಅವರಿಗಾಗಿ ಶೋಧ ನಡೆಸುತ್ತಿದ್ದಾರೆ.

ADVERTISEMENT

ಪ್ರಕರಣದ ವಿವರ: ‘ಶಾಖೆಯ ಲಾಕರ್‌ನಲ್ಲಿದ್ದ ಅಸಲಿ ಆಭರಣಗಳನ್ನು ಕದ್ದಿದ್ದ ಆರೋಪಿಗಳು, ಅದೇ ಜಾಗದಲ್ಲಿ ನಕಲಿ ಆಭರಣ ಇಟ್ಟಿದ್ದರು. ನಂತರ, ಅಸಲಿ ಆಭರಣಗಳನ್ನು ಮಣಪ್ಪುರಂ ಫೈನಾನ್ಸ್‌ನಲ್ಲಿ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು. ಈ ಮೂಲಕ ಕಂಪನಿಗೆ ₹ 55 ಲಕ್ಷ ವಂಚನೆ ಮಾಡಿದ್ದು ಲೆಕ್ಕ ಪರಿಶೋಧನೆಯಿಂದ ಗೊತ್ತಾಗಿತ್ತು. ಸುನಂದಾ, ಶಾಖೆಯ ಗ್ರಾಹಕರ ಸೇವಾ ಪ್ರತಿನಿಧಿಗಳಾದ ಶಿಲ್ಪಾ, ನಿಹಾಲ್ ಅಂಥೋನಿ ರಾಜ್ ಸೇರಿ ಕೃತ್ಯ ಎಸಗಿದ್ದು ಆಂತರಿಕ ತನಿಖೆಯಿಂದ ಬಯಲಾಗಿತ್ತು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ತಪ್ಪೊಪ್ಪಿಕೊಂಡಿದ್ದ ಸುನಂದಾ, ಹಂತ ಹಂತವಾಗಿ ಹಣ ಪಾವತಿ ಮಾಡುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಕೆಲ ತಿಂಗಳ ನಂತರ ಅವರು ತಲೆಮರೆಸಿಕೊಂಡಿದ್ದು, ಇದುವರೆಗೂ ಸುಳಿವು ಸಿಕ್ಕಿಲ್ಲ. ಅವರ ಬಗ್ಗೆ ಮಾಹಿತಿ ಇರುವ ಸಾರ್ವಜನಿಕರು, ಬೇಗೂರು ಠಾಣೆ (080–22942551) ಅಥವಾ ಇನ್‌ಸ್ಪೆಕ್ಟರ್ (94808–01217) ಸಂಪರ್ಕಿಸಬಹುದು’ ಎಂದೂ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.