ADVERTISEMENT

ಮೆಟ್ರೊ ರೈಲಿನಲ್ಲಿ ಜನಜಾತ್ರೆ; 4.80 ಲಕ್ಷ ಜನ ಪ್ರಯಾಣ

ನೂಕುನುಗ್ಗಲಿನಲ್ಲಿ ಸಿಲುಕಿ ಪರದಾಡಿದ ಪ್ರಯಾಣಿಕರು

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2022, 21:26 IST
Last Updated 15 ಆಗಸ್ಟ್ 2022, 21:26 IST
ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಲ್ಲಿ ಸೋಮವಾರ ಉಂಟಾಗಿದ್ದ ಜನದಟ್ಟಣೆ –ಪ್ರಜಾವಾಣಿ ಚಿತ್ರ
ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣದಲ್ಲಿ ಸೋಮವಾರ ಉಂಟಾಗಿದ್ದ ಜನದಟ್ಟಣೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ಒಂದೆಡೆ ಕಾಂಗ್ರೆಸ್ ನಡಿಗೆ, ಮತ್ತೊಂದೆಡೆ ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನ, ಮೆಟ್ರೊ ರೈಲುಗಳಲ್ಲಿ ಕಾಲಿಡಲು ಜಾಗವಿಲ್ಲದೆ ಪರದಾಡಿದ ಜನ...

ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿದ್ದ ಜನ ಫಲಪುಷ್ಪ ಪ್ರದರ್ಶನ, ಶಾಪಿಂಗ್ ಕಾಂಪ್ಲೆಕ್ಸ್‌ಗಳಿಗೆ ಸುತ್ತಾಡಲು ಮೆಟ್ರೊ ರೈಲು ಹತ್ತಿದರು. ದಟ್ಟಣೆಯಲ್ಲಿ ಸಿಲುಕಿ ಒದ್ದಾಡಿದರು. ಮಧ್ಯಾಹ್ನದ ತನಕ ಸಾಮಾನ್ಯ ಸ್ಥಿತಿಯಲ್ಲಿಯೇ ಇದ್ದ ಮೆಟ್ರೊ ಪ್ರಯಾಣ, ಮಧ್ಯಾಹ್ನದ ಬಳಿಕ ಕಷ್ಟಕರವೆನಿಸಿತು. ತುಮಕೂರು ರಸ್ತೆ ನಾಗಸಂದ್ರ, ಕೆಂಗೇರಿ, ಯಶವಂತಪುರ, ನಾಡಪ್ರಭು ಕೆಂಪೇಗೌಡ ಮೆಟ್ರೊ ರೈಲು ನಿಲ್ದಾಣಗಳಲ್ಲಿ ಜನಜಂಗುಳಿ ತೀವ್ರಗೊಂಡಿತ್ತು.

ಸ್ವಾತಂತ್ರ್ಯ ನಡಿಗೆಯಲ್ಲಿ ಭಾಗವ ಹಿಸಲು ಬಂದಿದ್ದ ಜನರಿಗಾಗಿಯೇ ಕಾಂಗ್ರೆಸ್ 80 ಸಾವಿರ ಟಿಕೆಟ್‌ಗಳನ್ನು ಖರೀದಿಸಿತ್ತು. ತ್ರಿವರ್ಣ ಧ್ವಜ ಹಿಡಿದು ಘೋಷಣೆಗಳನ್ನು ಕೂಗುತ್ತ ಮೆಟ್ರೊ ನಿಲ್ದಾಣಗಳನ್ನು ಜನ ಪ್ರವೇಶಿಸಿದರು. ರೈಲಿನಲ್ಲಿ ನೂಕುನುಗ್ಗಲಿನ ನಡುವೆಯೂ ಘೋಷಣೆಗಳನ್ನು ಮೊಳಗಿಸಿದರು.

ADVERTISEMENT

ಗುಂಪು–ಗುಂಪಾಗಿ ಬಂದ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಿ ರೈಲು ಹತ್ತಿಸಲು ಮೆಟ್ರೊ ನಿಲ್ದಾಣದ ಸಿಬ್ಬಂದಿ ಹರಸಾಹಸಪಟ್ಟರು. ಕಾಂಗ್ರೆಸ್ ಕಾರ್ಯಕ್ರಮಕ್ಕೆ ಬಂದಿದ್ದ ಜನರನ್ನು ಲೆಕ್ಕ ಹಾಕಿ, ಪ್ರತ್ಯೇಕ ಸಾಲಿನಲ್ಲಿ ಒಳಕ್ಕೆ ಕಳುಹಿಸಲಾಗುತ್ತಿತ್ತು. ಸಾಮಾನ್ಯ ಪ್ರಯಾಣಿಕರು ಸಾಮಾನ್ಯ ಪ್ರವೇಶ ದ್ವಾರದಲ್ಲಿ ಪ್ರವೇಶ ಪಡೆದರು. ಎಲ್ಲಾ ಪ್ರಯಾಣಿಕರನ್ನು ರೈಲು ಬೋಗಿಯೊಳಕ್ಕೆ ತಳ್ಳಿ ಹತ್ತಿಸಲು ಭದ್ರತಾ ಸಿಬ್ಬಂದಿ ಪರದಾಡಿದರು.

ಕೆಂಪೇಗೌಡ ನಿಲ್ದಾಣದ ಎಲ್ಲಾ ಮಹಡಿಗಳಲ್ಲೂ ಕಾಲಿಡಲು ಜಾಗವಿಲ್ಲದಷ್ಟು ಜನದಟ್ಟಣೆ ಉಂಟಾಗಿತ್ತು. ಮೆಟ್ರೊ ರೈಲು ಹತ್ತಿದ್ದ ಕಾರ್ಯಕರ್ತರು ನ್ಯಾಷನಲ್ ಕಾಲೇಜು ನಿಲ್ದಾಣದಲ್ಲಿ ಇಳಿಯಬೇಕಾಗಿತ್ತು. ಸರಿಯಾದ ಮಾರ್ಗದರ್ಶನ ಇಲ್ಲದೆ ಕೆಲವರು ಎಂ.ಜಿ. ರಸ್ತೆ ಕಡೆಗೆ ಪ್ರಯಾಣಿಸಿದರೆ, ಕೆಲವರು ಮತ್ತೆ ನಾಗಸಂದ್ರ ಕಡೆಗೆ ಹೋಗುವ ರೈಲುಗಳನ್ನೇ ಹತ್ತಿದರು. ಲಾಲ್‌ಬಾಗ್ ಫಲಪುಷ್ಪ ಪ್ರದರ್ಶನಕ್ಕೆ ತೆರಳಬೇಕಾದ ಜನರೂ ದಟ್ಟಣೆ ನಡುವೆ ಸಿಲುಕಿ ಪರಿತಪಿಸಿದರು.

4.80 ಲಕ್ಷ ಜನ ಪ್ರಯಾಣ
‘ಮೆಟ್ರೊ ರೈಲಿನಲ್ಲಿ ಸಾಮಾನ್ಯವಾಗಿ 2.50 ಲಕ್ಷದಿಂದ 3 ಲಕ್ಷ ಜನ ನಿತ್ಯವೂ ಪ್ರಯಾಣಿಸುತ್ತಾರೆ. ಸೋಮವಾರ ಒಂದೇ ದಿನ ಮೆಟ್ರೊ ಸ್ಮಾರ್ಟ್‌ ಕಾರ್ಡ್‌ ಮತ್ತು ಟೋಕನ್ ಬಳಸಿ ಸುಮಾರು 4 ಲಕ್ಷದಷ್ಟು ಜನ ಪ್ರಯಾಣಿಸಿದ್ದಾರೆ. ಇದಲ್ಲದೇ ಕಾಂಗ್ರೆಸ್ 80 ಸಾವಿರ ಟಿಕೆಟ್‌ ಖರೀದಿಸಿತ್ತು. ಒಟ್ಟಾರೆ 4.80 ಲಕ್ಷ ಜನ ಪ್ರಾಣಿಸಿದ್ದಾರೆ’ ಎಂದು ಬಿಎಂಆರ್‌ಸಿಎಲ್ ಅಂದಾಜಿಸಿದೆ.

‘ಮಂಗಳವಾರ ಎಷ್ಟು ಟಿಕೆಟ್ ವಾಪಸ್ ಬರಲಿವೆ ಎಂಬುದನ್ನು ಆಧರಿಸಿ, ಎಷ್ಟು ಮಂದಿ ಪ್ರಯಾಣಿಸಿದ್ದಾರೆ ಎಂಬುದನ್ನು ಹೇಳಬಹುದು. ತಲಾ ₹30 ದರದಲ್ಲಿ ಟಿಕೆಟ್ ಮಾರಾಟ ಮಾಡಲಾಗುತ್ತದೆ. ಅದೇ ದರಕ್ಕೆ ಕಾಂಗ್ರೆಸ್ ಟಿಕೆಟ್ ಖರೀದಿಸಿದ್ದು, ₹25 ಲಕ್ಷ ಮುಂಗಡ ಹಣವನ್ನೂ ಪಾವತಿಸಿದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.