ADVERTISEMENT

ಶೈಕ್ಷಣಿಕ ವಿನಿಮಯ; ಭಾರತ–ಚೀನಾ ಸಂಬಂಧ ವೃದ್ಧಿ: ಪುರುಷೋತ್ತಮ ಬಿಳಿಮಲೆ

ಫುಡಾನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ಪುರುಷೋತ್ತಮ ಬಿಳಿಮಲೆ ಸಭೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 14:24 IST
Last Updated 11 ನವೆಂಬರ್ 2025, 14:24 IST
ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಪುರುಷೋತ್ತಮ ಬಿಳಿಮಲೆ
ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರೊಂದಿಗೆ ಪುರುಷೋತ್ತಮ ಬಿಳಿಮಲೆ   

ಬೆಂಗಳೂರು: ‘ಶೈಕ್ಷಣಿಕ ವಿನಿಮಯಗಳು ಭಾರತ ಮತ್ತು ಚೀನಾ ನಡುವಿನ ಸಂಬಂಧ ವೃದ್ಧಿಸುವಲ್ಲಿ ಪ್ರಧಾನ ಪಾತ್ರ ವಹಿಸಲಿವೆ’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟರು.

ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರತಿನಿಧಿಗಳೊಂದಿಗೆ ನಗರದಲ್ಲಿ ಮಂಗಳವಾರ ಸಭೆ ನಡೆಸಿ ಮಾತನಾಡಿದ ಅವರು, ‘ವಸಾಹತುಶಾಹಿ ವ್ಯವಸ್ಥೆಗೂ ಪೂರ್ವದಲ್ಲಿ ಭಾರತ ಮತ್ತು ಏಷ್ಯಾ ಖಂಡದ ದೇಶಗಳ ನಡುವೆ ಅತ್ಯುತ್ತಮ ಸಂವಹನ ಜಾರಿಯಲಿತ್ತು. ಚೀನಾ ದೇಶದ ಸಂಸ್ಕೃತಿಯ ಪ್ರಭಾವವನ್ನು ಭಾರತ ಹೊಂದಿತ್ತು. ಅದೇ ರೀತಿ, ಇಲ್ಲಿನ ಬೌದ್ಧ ಧರ್ಮವು ಚೀನಾವನ್ನು ಅತ್ಯಂತ ಪರಿಣಾಮಕಾರಿಯಾಗಿ ಆಕರ್ಷಿಸಿತು. ಜಾಗತೀಕರಣದ ನಂತರ ಈ ಎರಡು ದೇಶಗಳು ಪರಸ್ಪರ ಅವಲಂಬಿತವಾಗುವ ಎಲ್ಲ ಅವಕಾಶಗಳಿದ್ದರೂ, ಕೆಲವು ಅನಿಯಂತ್ರಿತ ಸಂಘರ್ಷಗಳು ಇದನ್ನು ತಡೆಯುತ್ತಿವೆ’ ಎಂದು ಹೇಳಿದರು.

‘ಕೌಟುಂಬಿಕತೆ ಎನ್ನುವ ಒಂದೇ ಮಾದರಿಯ ಸಂಸ್ಕೃತಿಯನ್ನು ಹೊಂದಿರುವ ಭಾರತ ಮತ್ತು ಚೀನಾ ಒಗ್ಗಟ್ಟಾಗಿ ಯೋಚಿಸಬೇಕಾದ ಸಂದರ್ಭ ಇದಾಗಿದೆ’ ಎಂದರು.

ADVERTISEMENT

‘ಭಾರತೀಯ ಜ್ಞಾನ ವ್ಯವಸ್ಥೆಯಲ್ಲಿ ಜನಪದ ಮತ್ತು ಮುಖ್ಯ ಸಂಸ್ಕೃತಿಗಳ ನಡುವೆ ಯಾವುದೇ ಸಂಘರ್ಷವಿಲ್ಲದಿರುವ ಕಾರಣ, ಈ ದೇಶವು ಸುದೀರ್ಘ ಅವಧಿಗೆ ಒಂದು ದೇಶವಾಗಿ ಉಳಿಯಲು ಸಾಧ್ಯವಾಗಿದೆ’ ಎಂದು ಅಭಿಪ್ರಾಯಪಟ್ಟರು.

‘ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬರೂ ಒಂದು ಸಮಾನ ತಾತ್ವಿಕತೆಗೆ ತಮ್ಮನ್ನು ಒಪ್ಪಿಸಿಕೊಂಡಿದ್ದಾರೆ. ಅದೇ ಸಂದರ್ಭದಲ್ಲಿ ವ್ಯಕ್ತಿಗತ ನಿಲುವುಗಳನ್ನು ಗೌರವಿಸುವ ಮನೋಧರ್ಮವನ್ನು ಸಹ ಹೊಂದಿರುವುದು ಇಲ್ಲಿನ ಏಕತೆಯ ಮೂಲವಾಗಿದೆ’ ಎಂದರು.

ಸಭೆಯಲ್ಲಿ ಚೀನಾದ ಫುಡಾನ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ಝಾಂಗ್ ಜಿಯಡಾಂಗ್, ಜಿಯನ್ ಜಂಬೋ, ಗುಯೋ ಡಿಂಗ್ ಪಿಂಗ್, ವೆನ್ ಯವೋ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.