
ಬೆಂಗಳೂರು: ‘2028ರ ವೇಳೆಗೆ ಭಾರತವು ಜಪಾನ್ ಮತ್ತು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯಾಗುವ ನಿರೀಕ್ಷೆಯಿದೆ. 25 ವರ್ಷದಲ್ಲಿ ನವ ಭಾರತ ರೂಪಿಸಲು ಅವಕಾಶವಿದ್ದು, ಇದನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಿ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಸೆಂಟರ್ ಫಾರ್ ನ್ಯಾನೋ ಸೈನ್ಸಸ್ ಅಂಡ್ ಎಂಜಿನಿಯರಿಂಗ್ ವಿಭಾಗದ ಡೀನ್ ನವಕಾಂತ ಭಟ್ ಕಿವಿಮಾತು ಹೇಳಿದರು.
ಸೋಮವಾರ ನಗರದಲ್ಲಿ ನಡೆದ ರಾಮಯ್ಯ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್‌ನ (ಆರ್‌ಯುಎಎಸ್) ಘಟಿಕೋತ್ಸವದಲ್ಲಿ ಮಾತನಾಡಿದರು.
‘2000ರಲ್ಲಿ ವಿಶ್ವದ ಜನಸಂಖ್ಯೆಯ ಶೇ 5ಕ್ಕಿಂತ ಕಡಿಮೆ ಜನರು ಇಂಟರ್‌ನೆಟ್ ಬಳಸುತ್ತಿದ್ದರು. ಈಗ 100ರಲ್ಲಿ 70 ಜನರು ಇಂಟರ್‌ನೆಟ್ ಸಂಪರ್ಕ ಹೊಂದಿದ್ದಾರೆ. ಸ್ಮಾರ್ಟ್ ಫೋನ್, ಇಂಟರ್‌ನೆಟ್, ಸಾಮಾಜಿಕ ಮಾಧ್ಯಮ, ಡಿಜಿಟಲ್ ಬ್ಯಾಂಕಿಂಗ್ ತಂತ್ರಜ್ಞಾನದೊಂದಿಗೆ ಶಿಕ್ಷಣ ಪಡೆದವರಿಗೆ ಈಗ ಅವಕಾಶಗಳು ಹೆಚ್ಚಿವೆ’ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಆರ್‌ಯುಎಎಸ್ ಕುಲಪತಿ ಎಂ.ಆರ್.ಜಯರಾಂ ಮಾತನಾಡಿ, ‘ಉದ್ದೇಶ, ಗುರಿ ಹಾಗೂ ವೃತ್ತಿ ಬೆಳವಣಿಗೆ ಮುಂದಿಟ್ಟುಕೊಂಡು ಜ್ಞಾನ, ಪದವಿ ಪಡೆದಿದ್ದೀರಿ. ಪದವಿ ಎಂಬುದು ಕೇವಲ ಶೈಕ್ಷಣಿಕ ಗುರುತಷ್ಟೇ ಅಲ್ಲ. ಯಾರು ವಿಭಿನ್ನವಾಗಿ ಆಲೋಚನೆ ಮಾಡುತ್ತಾರೊ, ಅವರಿಗೆ ಉತ್ತಮ ಭವಿಷ್ಯ ಇದೆ’ ಎಂದರು.
ಸಮ ಕುಲಾಧಿಪತಿ ಕುಲ್‌ದೀಪ್ ಕುಮಾರ್ ರೈನಾ ಮಾತನಾಡಿ, ‘ಕೌಶಲ ಅಭಿವೃದ್ಧಿ ಮತ್ತು ಉದ್ಯಮ-ಆಧಾರಿತ ಪಠ್ಯಕ್ರಮದ ಮೇಲೆ ಗಮನಹರಿಸಿರುವ ಯೂನಿವರ್ಸಿಟಿ ಆಫ್ ಅಪ್ಲೈಡ್ ಸೈನ್ಸಸ್, ವಿದ್ಯಾರ್ಥಿಗಳನ್ನು ಪ್ರಾಯೋಗಿಕ ಸಾಮರ್ಥ್ಯಗಳೊಂದಿಗೆ ಸಜ್ಜುಗೊಳಿಸುತ್ತಿದೆ’ ಎಂದು ತಿಳಿಸಿದರು.
ಘಟಿಕೋತ್ಸವದಲ್ಲಿ ಒಟ್ಟು 2,095 ಮಂದಿಗೆ ಪದವಿ ಪ್ರದಾನ ಮಾಡಲಾಯಿತು.
ಪದವಿ ಪಡೆದ ಸಂಭ್ರಮ
ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪಡೆದ ಸಡಗರ ಪೋಷಕರು ಸ್ನೇಹಿತರು ಕೂಡ ಸಂಭ್ರಮದಲ್ಲಿ ಭಾಗಿಯಾದರು ಒಟ್ಟು 2095 ಪದವಿಗಳನ್ನು ವಿತರಣೆ ಮಾಡಲಾಯಿತು. ಈ ಪೈಕಿ 50 ಪಿ.ಎಚ್ ಡಿ. 698 ಸ್ನಾತಕೋತ್ತರ ಹಾಗೂ 1347 ಪದವಿ ಹಂತದ್ದು ಪ್ರದಾನ ಮಾಡಲಾಯಿತು. ಶೈಕ್ಷಣಿಕವಾಗಿ ಅಮೋಘ ಸಾಧನೆ ತೋರಿದ ವಿದ್ಯಾರ್ಥಿಗಳಿಗೆ 107 ಪದಕಗಳನ್ನು ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.