ಬೆಂಗಳೂರು: ನಗರದ ವೈಟ್‌ಫೀಲ್ಡ್‌ನಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ದೇವಗೊಂಡಿ ರೈಲು ನಿಲ್ದಾಣಕ್ಕೆ ಸಮೀಪದಲ್ಲೇ, ರೈಲು ಮಾರಗದ ಮೇಲೆ ಒಂದು ಬೃಹತ್ ಕಾಂಕ್ರೀಟ್ ಸೇತುವೆ ನಿಂತಿದೆ. ಬಳಸುವವರಿಲ್ಲದೆ ಈ ಸೇತುವೆ ಎಂಟು ವರ್ಷಗಳಿಂದ ಹೀಗೆ ನಿಂತೇ ಇದೆ. ಏಕೆಂದರೆ ಸೇತುವೆ ಏರಲಾಗಲೀ, ಅದರಿಂದ ಇಳಿಯಾಗಲೀ ಹಾದಿಯೇ ಇಲ್ಲ.
‘ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ನಡುವಣ ಸಮನ್ವಯದ ಕೊರತೆಗೆ ಮೂಕಸಾಕ್ಷಿಯಂತಿದೆ ಈ ಸೇತುವೆ’ ಎಂದು ಮಹಾಲೇಖಪಾಲರ (ಸಿಎಜಿ) ವರದಿಯಲ್ಲೇ ಉಲ್ಲೇಖಿಸಲಾಗಿದೆ. ಸಂಸತ್ತಿನಲ್ಲಿ ಈಚೆಗೆ ಮಂಡಿಸಲಾಗಿರುವ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ಮತ್ತು ನಿರ್ವಹಣೆ–2023 ಸಿಎಜಿ ವರದಿಯಲ್ಲಿ ಈ ಮಾಹಿತಿ ಇದೆ.
ವೈಟ್‌ಫೀಲ್ಡ್–ದೇವಗೊಂಡಿ ನಿಲ್ದಾಣಗಳ ಮಧ್ಯೆ ರೈಲ್ವೆ ಲೆವೆಲ್ ಕ್ರಾಸಿಂಗ್ ಇದ್ದು, ಪ್ರತಿದಿನ ಸಾವಿರಾರು ವಾಹನಗಳು ಓಡಾಡುತ್ತವೆ. ಕಣೇಕಲ್ಲು ಮತ್ತು ಮಾಕನಹಳ್ಳಿ ಗ್ರಾಮಗಳ ಮಧ್ಯೆ ಈ ಲೆವೆಲ್ ಕ್ರಾಸಿಂಗ್ ಮಾತ್ರವೇ ಏಕೈಕ ಸಂಪರ್ಕಕೊಂಡಿ. ಅಲ್ಲದೆ, ವೈಟ್‌ಫೀಲ್ಡ್‌ನ ಪೂರ್ವಭಾಗದಿಂದ ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇಗೂ ಈ ಲೆವೆಲ್ ಕ್ರಾಸಿಂಗ್ ಸಂಪರ್ಕ ಕಲ್ಪಿಸುತ್ತದೆ.
ಈ ಲೆವೆಲ್ ಕ್ರಾಸಿಂಗ್ ಬದಲಿಗೆ ಸೇತುವೆ ನಿರ್ಮಿಸುವ ಸಂಬಂಧ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರವು 2011ರಲ್ಲಿ ಒಪ್ಪಂದ ಮಾಡಿಕೊಂಡಿದ್ದವು. ರೈಲ್ವೆ ಮಾರ್ಗದ ಮೇಲೆ ಸೇತುವೆ ನಿರ್ಮಿಸುವ ಹೊಣಗಾರಿಕೆ ರೈಲ್ವೆ ಇಲಾಖೆಯದ್ದು, ಅದಕ್ಕೆ ಸಂಪರ್ಕ ರಸ್ತೆ ನಿರ್ಮಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿತ್ತು.
‘ರೈಲ್ವೆಯು 2015ರಲ್ಲಿ ಕಾಮಗಾರಿ ಆರಂಭಿಸಿ, 2018ರಲ್ಲಿ ಸೇತುವೆಯ ಭಾಗವನ್ನು ಪೂರ್ಣಗೊಳಿಸಿತು. ಆದರೆ ರಾಜ್ಯ ಸರ್ಕಾರದ ಲೋಕೋಪಯೋಗಿ ಇಲಾಖೆ ಮಾತ್ರ ಕಾಮಗಾರಿ ಆರಂಭಿಸಲಿಲ್ಲ. ಸಂಪರ್ಕ ರಸ್ತೆ ನಿರ್ಮಾಣಕ್ಕೆ ಅಗತ್ಯವಿದ್ದ ಭೂಮಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡಿಲ್ಲ. ಹೀಗಾಗಿ ಸೇತುವೆ ನಿರ್ಮಾಣವಾದರೂ, ಜನರ ಬಳಕೆಗೆ ಲಭ್ಯವಾಗಿಲ್ಲ. ಜನರ ತೆರಿಗೆ ಹಣ ಪೋಲಾಗಿದೆ’ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
‘ಯೋಜನಾ ವೆಚ್ಚದಲ್ಲಿ ರೈಲ್ವೆಯು ತನ್ನ ಪಾಲಿನ ₹10.29 ಕೋಟಿ ವೆಚ್ಚ ಮಾಡಿದೆ. ರಾಜ್ಯವು ತನ್ನ ಪಾಲಿನ ₹13.98 ಕೋಟಿ ಇನ್ನಷ್ಟೇ ನೀಡಬೇಕಿದೆ. ಅಗತ್ಯ ಅನುಮತಿ ಪಡೆದುಕೊಳ್ಳದೆ ಮತ್ತು ರಾಜ್ಯವೂ ವೆಚ್ಚಮಾಡುವುದನ್ನು ಖಾತರಿ ಮಾಡಿಕೊಳ್ಳದೇ ರೈಲ್ವೆಯ ಹಣವನ್ನು ವೆಚ್ಚ ಮಾಡಿದ ಅಧಿಕಾರಿಯ ವಿರುದ್ಧ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಸಿಎಜಿ ಹೇಳಿದೆ.
2023ರಲ್ಲಿ ಪರಿಶೀಲನೆ ನಡೆಸಿ ವರದಿ ಸಿದ್ದಪಡಿಸಿದಾಗ ಸೇತವೆ ಹೇಗೆ ನಿಂತಿತ್ತೋ, ಈಗಲೂ ಹಾಗೆಯೇ ನಿಂತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.