ಬೆಂಗಳೂರು: ‘ಎಲ್ಲ ಕ್ಷೇತ್ರಗಳಲ್ಲೂ ಪ್ರಗತಿ ಸಾಧಿಸಿ ವಿಶ್ವದಲ್ಲೇ ಆರ್ಥಿಕವಾಗಿ ಸದೃಢವಾಗುತ್ತಿರುವ ಚೀನಾ ಹಾಗೂ ಭಾರತ ವ್ಯಾಪಾರ ಇನ್ನಿತರ ಕ್ಷೇತ್ರಗಳಲ್ಲಿ ಸಹಯೋಗವನ್ನು ಹೆಚ್ಚಿಸಿಕೊಳ್ಳಬೇಕು’ ಎಂದು ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯ ಸಲಹೆ ನೀಡಿದರು.
ಭಾರತ–ಚೀನಾ ಸ್ನೇಹ ಸಂಘದ ( ಐಸಿಎಫ್ಎ) ಕರ್ನಾಟಕ ಘಟಕವು ನಗರದ ಚಿತ್ರಕಲಾ ಪರಿಷತ್‌ನಲ್ಲಿ ಭಾನುವಾರ ಆಯೋಜಿಸಿದ್ದ ಚೀನಾ ಜನತಾ ಗಣರಾಜ್ಯದ 76ನೇ ವಾರ್ಷಿಕೋತ್ಸವ, ಭಾರತ ಮತ್ತು ಚೀನಾ ನಡುವಿನ ರಾಜತಾಂತ್ರಿಕ ಸಂಬಂಧ ಸ್ಥಾಪನೆಯ 75ನೇ ವಾರ್ಷಿಕೋತ್ಸವ, ಚೀನಾದ ಛಾಯಾಚಿತ್ರಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
‘75 ವರ್ಷದಲ್ಲಿ ಚೀನಾ ಸಾಧಿಸಿರುವ ಪರಿ ಅಗಾಧವಾದದ್ದು. ಆಟೊಮೊಬೈಲ್ ನಂತರ ತಂತ್ರಜ್ಞಾನ ವಲಯದಲ್ಲೂ ಚೀನಾ ಜಾಗತಿಕ ನಾಯಕತ್ವ ಪಡೆದುಕೊಂಡಿದೆ. ಭಾರತ ಕೂಡ ಚೀನಾಕ್ಕೆ ಕಡಿಮೆ ಇಲ್ಲದಂತೆ ಬೆಳೆದಿದೆ. ಜವಾಹರಲಾಲ್ ನೆಹರೂ, ರಾಜೀವ್ ಗಾಂಧಿ ಅವರ ಅವಧಿಯಲ್ಲಿ ಚೀನಾದೊಂದಿಗೆ ಉತ್ತಮ ಸಂಬಂಧ ಉಳಿಸಿಕೊಂಡು ಬರಲಾಗಿತ್ತು’ ಎಂದು ತಿಳಿಸಿದರು.
‘ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿಧಿಸಿದ ಸುಂಕದ ಹೊರೆಯನ್ನು ಚೀನಾ ಸಮರ್ಥವಾಗಿಯೇ ಎದುರಿಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಯೋಚಿಸಬೇಕು’ ಎಂದು ಸಲಹೆ ನೀಡಿದರು.
ಮುಂಬೈನಲ್ಲಿರುವ ಚೀನಾದ ಕಾನ್ಸುಲ್ ಜನರಲ್ ಕಿನ್ ಜೀ ಮಾತನಾಡಿ, ‘ಭಾರತ ಹಾಗೂ ಚೀನಾ ಕಾಲಕಾಲಕ್ಕೆ ಅಗತ್ಯ ಬದಲಾವಣೆಗಳೊಂದಿಗೆ ಬೆಳವಣಿಗೆ ಕಂಡ ದೇಶಗಳು. ಜನಸಂಖ್ಯೆ ಹೆಚ್ಚಿರುವುದು ಎರಡೂ ದೇಶಗಳಿಗೆ ವರದಾನವೇ ಆಗಿದೆ. ನೆಹರೂ ಕಾಲದಿಂದಲೂ ರಾಜತಾಂತ್ರಿಕ ಸಂಬಂಧಗಳು ಗಟ್ಟಿಯಾಗಿದ್ದು ನಿರಂತರವಾಗಿ ಕಾಪಾಡಿಕೊಳ್ಳುವ ವಿಶ್ವಾಸವಿದೆ’ ಎಂದರು.
ಸಂಘದ ಅಧ್ಯಕ್ಷ ಕೆ. ಶ್ರೀನಿವಾಸಗೌಡ, ಕಾರ್ಯದರ್ಶಿ ಬಿ. ಭಾಸ್ಕರನ್, ವಿಧಾನ ಪರಿಷತ್‌ನ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ ಮತ್ತಿತರರು ಇದ್ದರು.
ಕರ್ನಾಟಕದಿಂದಲೂ ಉನ್ನತ ಶಿಕ್ಷಣಕ್ಕೆಂದು ಸಹಸ್ರಾರು ವಿದ್ಯಾರ್ಥಿಗಳು ಚೀನಾಕ್ಕೆ ತೆರಳುತ್ತಿದ್ದಾರೆ. ಅಲ್ಲಿಂದಲೂ ಭಾರತಕ್ಕೂ ಬರುತ್ತಾರೆ. ಜ್ಞಾನವೂ ಎರಡೂ ದೇಶಗಳ ಸಂಬಂಧವನ್ನು ಬೆಸೆದಿದೆ.ಪಿಜಿಆರ್ ಸಿಂಧ್ಯ, ಮಾಜಿ ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.