ADVERTISEMENT

ಇಂದಿರಾ ಕ್ಯಾಂಟೀನ್‌ ಹೆಸರು ಬದಲಾವಣೆ– ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2021, 12:20 IST
Last Updated 16 ಆಗಸ್ಟ್ 2021, 12:20 IST
ಆರ್‌.ಅಶೋಕ
ಆರ್‌.ಅಶೋಕ   

ಬೆಂಗಳೂರು: ಇಂದಿರಾ ಕ್ಯಾಂಟೀನ್‌ಗಳ ಹೆಸರುಗಳನ್ನು ಬದಲಾಯಿಸುವ ಬಗ್ಗೆ ಸರ್ಕಾರದ ಸಂಪುಟ ಸಭೆಯಲ್ಲಾಗಲೀ, ಮಂತ್ರಿ ಮಂಡಲದ ಸದಸ್ಯರ ಜೊತೆಗಾಗಲೀ, ಯಾವುದೇ ಚರ್ಚೆಯೇ ನಡೆದಿಲ್ಲ ಎಂದು ಕಂದಾಯ ಸಚಿವ ಆರ್‌.ಅಶೋಕ ಸ್ಪಷ್ಟಪಡಿಸಿದರು.

ಸೋಮವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಇಂದಿರಾ ಕ್ಯಾಂಟೀನ್‌ಗಳಿಗೆ ಅನ್ನಪೂರ್ಣೇಶ್ವರಿ ಹೆಸರು ಇಡುವಂತೆ ಬಿಜೆಪಿಯ ಹಲವು ಮುಖಂಡರು ಒತ್ತಾಯ ಮಾಡಿದ್ದಾರೆ. ಒಂದೊಂದು ಸರ್ಕಾರ ಅಧಿಕಾರಕ್ಕೆ ಬಂದಾಗ ಒಬ್ಬೊಬ್ಬರ ಹೆಸರು ಇಡುತ್ತಾ ಹೋಗುವುದು ಸರಿಯಲ್ಲ. ಶಾಶ್ವತವಾಗಿ ಒಂದು ಹೆಸರು ಇಡಬೇಕು ಎಂದು ಹೇಳಿದ್ದಾರೆ. ಆದರೆ, ಮುಖ್ಯಮಂತ್ರಿಯವರು ಈ ಬಗ್ಗೆ ನಮ್ಮೊಂದಿಗೆ ಚರ್ಚೆ ಮಾಡಿಲ್ಲ’ ಎಂದರು.

‘ಚರ್ಚೆಯೇ ಆಗದ ವಿಚಾರದ ಬಗ್ಗೆ ಹೇಳಿಕೆಗಳು ಬರುತ್ತಿರುವುದನ್ನು ನಾನು ನೋಡಿದ್ದೇನೆ. ಈ ವಿಚಾರದಲ್ಲಿ ವಾದ ವಿವಾದಗಳು ನಡೆಯುತ್ತಿರುವುದು ಒಳ್ಳೆಯದಲ್ಲ. ಇಂದಿರಾ ಕ್ಯಾಂಟೀನ್‌ ಬಗ್ಗೆಯಾಗಲೀ ಅಥವಾ ಅನ್ನಪೂರ್ಣೇಶ್ವರಿ ಹೆಸರಿಡುವ ಬಗ್ಗೆಯಾಗಲೀ ಸದ್ಯಕ್ಕೆ ಯಾವುದೇ ತೀರ್ಮಾನವನ್ನೂ ಸರ್ಕಾರ ತೆಗೆದುಕೊಂಡಿಲ್ಲ’ ಎಂದು ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.