ADVERTISEMENT

ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ: ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2021, 8:33 IST
Last Updated 20 ಫೆಬ್ರುವರಿ 2021, 8:33 IST
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್
ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್   

ಬೆಂಗಳೂರು: ‘ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. 63 ಸ್ಟಾರ್ ಹೊಟೇಲ್‌ಗಳನ್ನು ಕೈಗಾರಿಕೆ ವ್ಯಾಪ್ತಿಗೆ ತರಲಾಗುತ್ತಿದೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ಕೋವಿಡ್‌ನಿಂದ ಪ್ರವಾಸೋದ್ಯಮ ನಲುಗಿ ಹೋಗಿದೆ. ಇದನ್ನೇ ನಂಬಿದ್ದ ಸಂಸ್ಥೆಗಳು ಆರ್ಥಿಕ ಹಿಂಜರಿತ ಕಂಡಿವೆ. ಈ ಸಂಸ್ಥೆಗಳಿಗೆ ಚೇತರಿಕೆ ನೀಡಬೇಕಿದೆ. ಹೊಟೇಲ್ ಉದ್ಯಮಕ್ಕೆ ಒತ್ತು ಕೊಡುವ ಉದ್ದೇಶದಿಂದ ತೆರಿಗೆ, ಶುಲ್ಕ ಎಲ್ಲವೂ ಕಡಿಮೆ ಮಾಡಲಾಗುತ್ತದೆ’ ಎಂದೂ ಹೇಳಿದರು.

‘ವಾಣಿಜ್ಯ ದರದಲ್ಲಿ ಹೋಟೆಲ್‌ಗಳ ನಿರ್ಮಾಣವಾಗುತ್ತಿತ್ತು. ಈಗ ಕೈಗಾರಿಕೆ ಸ್ಥಾನಮಾನ ನೀಡುವುದರಿಂದ ತೆರಿಗೆ, ಶುಲ್ಕ ಕಡಿಮೆ ಆಗಲಿದೆ. ಪ್ರವಾಸೋದ್ಯಮಕ್ಕೂ ಉಪಯೋಗ ಆಗಲಿದೆ. ಆದರೆ, ಸಣ್ಣ ಸಣ್ಣ ಹೊಟೇಲ್‌ಗಳು ಇದರಡಿ ಬರುವುದಿಲ್ಲ. ಅವುಗಳನ್ನು ಬೇರೆ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

‘ರಾಜ್ಯದಲ್ಲಿ ಎರಡು ಸ್ಟಾರ್‌ನ ಸುಮಾರು ಒಂದು ಸಾವಿರ ಹೊಟೇಲ್‌ಗಳಿವೆ. ಹೆಚ್ಚು ತೆರಿಗೆ ಕಟ್ಟುವುದರಿಂದ ಕೈಗಾರಿಕೆಗಳಡಿ ಬರುತ್ತಿರಲಿಲ್ಲ. ಸಿಂಗಲ್ ಸ್ಟಾರ್‌ನಿಂದ 5 ಸ್ಟಾರ್‌ವರೆಗೆ ಹೋಟೆಲ್‌ಗಳಿಗೆ ಮಾನ್ಯತೆ ನೀಡಲಾಗುತ್ತದೆ. ಸ್ಟಾರ್ ಕೆಟಗರಿಯನ್ನು ಕೇಂದ್ರ ಸರ್ಕಾರದ ಸಮಿತಿ ನಿರ್ಧರಿಸುತ್ತದೆ’ ಎಂದರು.

‘ಪ್ರವಾಸೋದ್ಯಮ ಅಭಿವೃದ್ಧಿಗೆ ಕೇರಳ, ಗುಜರಾತ್‌ನಲ್ಲಿ ಹೆಚ್ಚು ಸೌಲಭ್ಯಗಳಿವೆ. ಆದರೆ, ನಮ್ಮ ರಾಜ್ಯದಲ್ಲಿ ಸೌಲಭ್ಯಗಳು ಕಡಿಮೆ. ಹೀಗಾಗಿ, ಅನಾನುಕೂಲ ಸರಿಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಮಯೂರ ಹೋಟೆಲ್‌ಗೂ ಸ್ಟಾರ್ ಮಾನ್ಯತೆಗೆ ಅರ್ಜಿ ಹಾಕಿದ್ದೇವೆ’ ಎಂದ ಅವರು, ‘ಹೊಟೇಲ್ ಕೂಡ ಮೂಲಸೌಕರ್ಯವೇ’ ಎಂದರು.

ನಂದಿ ಪ್ರವಾಸಿ ತಾಣ ಅಭಿವೃದ್ಧಿ ಕುರಿತು ಪ್ರತಿಕ್ರಿಯಿಸಿದ ಅವರು, ‘ಈವರೆಗೆ ಈ ತಾಣ ತೋಟಗಾರಿಕೆ ಇಲಾಖೆಯ ಹಿಡಿತದಲ್ಲಿತ್ತು. ಈಗ ಪ್ರವಾಸೋದ್ಯಮ ಇಲಾಖೆಗೆ ತೆಗೆದುಕೊಂಡಿದ್ದೇವೆ. ಕೇಬಲ್ ಕಾರ್ ವ್ಯವಸ್ಥೆ ಸೇರಿದಂತೆ ಎಲ್ಲವನ್ನೂ ಮಾಡುತ್ತೇವೆ. ಖಾಸಗಿಯವರ ಬಂಡವಾಳಕ್ಕೂ ಅವಕಾಶ ಕೊಟ್ಟಿದ್ದೇವೆ ಎಂದರು.

‘ನಂದಿ ಗಿರಿಧಾಮ, ಜೋಗ್‌ಫಾಲ್ಸ್, ಕೊಡಚಾದ್ರಿ, ಕೆಮ್ಮಣ್ಣು ಗುಂಡಿಯ ಅಭಿವೃದ್ಧಿಗೂ ನಿರ್ಧರಿಸಿದ್ದೇವೆ. ಬಾದಾಮಿ, ಪಟ್ಟದಕಲ್ಲು ಪಾರಂಪರಿಕ ತಾಣವಾಗಿ ಅಭಿವೃದ್ಧಿಗೆ ರೂಪುರೇಷೆ ಸಿದ್ಧವಾಗುತ್ತಿದ್ದು, ಈ ಬಗ್ಗೆ ಸಿದ್ದರಾಮಯ್ಯ ಅವರ ಜೊತೆಗೂ ಚರ್ಚಿಸಿದ್ದೇನೆ. ರೋರಿಚ್ ಎಸ್ಟೇಟ್ ಅನ್ನು ಸಾಂಸ್ಕೃತಿಕ ಕೇಂದ್ರವಾಗಿ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.