ಬೆಂಗಳೂರು: ‘ಬಿಬಿಎಂಪಿಯನ್ನು ಏಳು ನಗರ ಪಾಲಿಕೆಗಳಾಗಿ ವಿಂಗಡಿಸುವ ‘ಗ್ರೇಟರ್ ಬೆಂಗಳೂರು’ ಯೋಜನೆ ಬೆಂಗಳೂರಿಗರಿಗೆ ಮಾಡುತ್ತಿರುವ ಅನ್ಯಾಯ. ಕೆಂಪೇಗೌಡರಿಗೆ ಮಾಡುವ ಅವಮಾನ’ ಎಂದು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಆರೋಪಿಸಿದರು.
‘ಬೆಂಗಳೂರಿನಲ್ಲಿ ಹೆಚ್ಚು ನಗರ ಪಾಲಿಕೆಗಳು ಸೃಷ್ಟಿಯಾಗಲಿರುವುದರಿಂದ, ತಮಿಳರು, ಹಿಂದಿ ಭಾಷಿಕರು ಅಧಿಕಾರಕ್ಕೆ ಬರುವ ಸಾಧ್ಯತೆ ಇರುತ್ತದೆ. ಬೆಂಗಳೂರು ಮತ್ತೊಂದು ಬೆಳಗಾವಿಯಾಗುವ ಸಾಧ್ಯತೆ ಇದೆ. ಕನ್ನಡಿಗರಿಗೆ ಮಾರಕವಾಗಿರುವ ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ಹಾಗೂ ಯೋಜನೆಯನ್ನು ವಿರೋಧಿಸಿ ಏಪ್ರಿಲ್ 26ರಂದು ಈಡುಗಾಯಿ ಒಡೆಯುವ ಮೂಲಕ ಪ್ರತಿಭಟಿಸಲಾಗುತ್ತದೆ’ ಎಂದು ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ತಿಳಿಸಿದರು.
‘ನಗರದ ರಸ್ತೆಗಳ ರಿಪೇರಿ, ಜನರಿಗೆ ಕುಡಿಯುವ ನೀರು ಕೊಡಲು ಸಾಧ್ಯವಾಗುತ್ತಿಲ್ಲ. ಆದರೂ ರಾಜಕೀಯ ಅಧಿಕಾರಕ್ಕಾಗಿ ನಗರವನ್ನು ಒಡೆದು ಹೋಳು ಮಾಡಿ, ವಿಕೇಂದ್ರೀಕರಣ ಮಾಡುತ್ತಿದ್ದೇವೆ ಎಂದು ನಾಟಕವಾಡುತ್ತಿದ್ದಾರೆ. ಮೊದಲು ನಗರ ನಿವಾಸಿಗಳಿಗೆ ಮೂಲಸೌಕರ್ಯ ಕೊಟ್ಟು, ಸಂಚಾರ ದಟ್ಟಣೆ ನಿವಾರಣೆಗೆ ಕ್ರಮಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.
‘ಗ್ರೇಟರ್ ಬೆಂಗಳೂರು ಯೋಜನೆಯಿಂದ ಬೆಂಗಳೂರನ್ನು ಒಡೆದು ಹಾಳು ಮಾಡಬಾರದು. ಯಾವುದೇ ಕಾರಣಕ್ಕೂ ಈ ಮಸೂದೆಗೆ ರಾಜ್ಯಪಾಲರು ಒಪ್ಪಿಗೆ ನೀಡಬಾರದು’ ಎಂದರು.
ಬೆಂಗಳೂರು: ‘ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ’ ಸಂವಿಧಾನದ 243ಡಬ್ಲ್ಯು ಅನುಚ್ಛೇದ ಉಲ್ಲಂಘನೆಯಾಗಿದ್ದು, ಇದನ್ನು ಜಾರಿ ಮಾಡಬಾರದು’ ಎಂದು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಅಠವಳೆ) ಬೆಂಗಳೂರು ನಗರ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
‘ಮಸೂದೆ ರಾಜಕೀಯ ಪ್ರೇರಿತವಾಗಿದ್ದು, ಶಾಸಕರು ತಮಗೆ ಬೇಕಾದವರನ್ನು ವಾರ್ಡ್ ಪ್ರತಿನಿಧಿಯಾಗಿ ನೇಮಕ ಮಾಡಿಕೊಳ್ಳಬಹುದು. ಮತದಾರರ ದನಿಯನ್ನು ದಮನಿಸುವ ಹುನ್ನಾರವೂ ಅಡಗಿದೆ’ ಎಂದು ಘಟಕದ ಸದಸ್ಯರು ದೂರಿದರು.
‘ಮಹಾನಗರ ಪಾಲಿಕೆಯ ಆಡಳಿತವು ಶಾಸಕರು ಹಾಗೂ ರಾಜ್ಯ ಸರ್ಕಾರದ ನಿಯಂತ್ರಣಕ್ಕೆ ಒಳಪಡುತ್ತದೆ. ಪಾರದರ್ಶಕ ಆಡಳಿತಕ್ಕೆ ಅಡ್ಡಿಯಾಗುತ್ತದೆ. ಆದ್ದರಿಂದ, ವಾರ್ಡ್‌ಗಳ ಅಧಿಕಾರವನ್ನು ಬಲಪಡಿಸಿ, ಕಾರ್ಪೊರೇಟರ್‌ಗಳು ಸ್ವತಂತ್ರವಾಗಿ ಆಡಳಿತ ನಡೆಸಬೇಕು’ ಎಂದು ಆಗ್ರಹಿಸಿದರು.
ಆರ್‌ಪಿಐನ ರಾಷ್ಟ್ರೀಯ ಕಾರ್ಯಾಧ್ಯಕ್ಷ ಎಂ. ವೆಂಕಟಸ್ವಾಮಿ, ರಾಜ್ಯ ಘಟಕದ ಅಧ್ಯಕ್ಷ ಸತೀಶ್, ಖಜಾಂಚಿ ಚಂದ್ರಶೇಖರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.