
ರಾಘವೇಂದ್ರ, ಮೋನಿಕಾ
ಬೆಂಗಳೂರು: ಎರಡನೇ ಪತಿಯನ್ನು ಬಿಟ್ಟು ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಪೊಲೀಸ್ ಕಾನ್‌ಸ್ಟೆಬಲ್ ಜತೆಗೆ ಮಹಿಳೆ ತೆರಳಿದ್ದು, ಈ ಸಂಬಂಧ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ.
ಮೂಡಲಪಾಳ್ಯದ ನಿವಾಸಿ ನೀಡಿದ ದೂರಿನ ಮೇರೆಗೆ ಕಾನ್‌ಸ್ಟೆಬಲ್ ರಾಘವೇಂದ್ರ ಹಾಗೂ ಎಚ್.ಮೋನಿಕಾ ಅವರ ವಿರುದ್ಧ ಚಿನ್ನ ಹಾಗೂ ನಗದು ಕಳ್ಳತನ ಮಾಡಿದ ಆರೋಪದ ಅಡಿ ಚಂದ್ರಾಲೇಔಟ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪ್ರಕರಣ ದಾಖಲಾದ ಮೇಲೆ ಸಿಎಆರ್ ಘಟಕದ ಕಾನ್‌ಸ್ಟೆಬಲ್ ಎಚ್.ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ.
‘ರಾಘವೇಂದ್ರ ಅವರು ಎಚ್‌ಎಸ್‌ಆರ್ ಲೇಔಟ್ ಠಾಣೆಯ ಹೊಯ್ಸಳ ವಾಹನದ ಚಾಲಕರಾಗಿ ಕೆಲಸ ಮಾಡುತ್ತಿದ್ದರು. ಅವರಿಗೆ ಮದುವೆಯಾಗಿ ಮಗು ಇದೆ. ಮೋನಿಕಾ ಅವರಿಗೆ ‘ರೀಲ್ಸ್’ ಮಾಡುವ ಹವ್ಯಾಸವಿತ್ತು. ಆ ರೀಲ್ಸ್ ವೀಕ್ಷಿಸಿದ್ದ ರಾಘವೇಂದ್ರ ಅವರು ಸಾಮಾಜಿಕ ಜಾಲತಾಣದಲ್ಲಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಮೊದಲ ಪತಿಯಿಂದ ದೂರವಾಗಿ ಎರಡನೇ ಮದುವೆಯಾಗಿದ್ದ ಮೋನಿಕಾ ಅವರು ಕಾನ್‌ಸ್ಟೆಬಲ್ ಕಳುಹಿಸಿದ್ದ ರಿಕ್ವೆಸ್ಟ್‌ಗೆ ಒಪ್ಪಿಗೆ ಸೂಚಿಸಿದ್ದರು. ಕೆಲವೇ ದಿನಗಳಲ್ಲಿ ಪರಿಚಯ ಪ್ರೀತಿಯಾಗಿ ಇಬ್ಬರು ಜೊತೆಯಾಗಿ ತಿರುಗಾಡಲು ಆರಂಭಿಸಿದ್ದರು. ಇಬ್ಬರೂ ರೀಲ್ಸ್ ಮಾಡಲು ಆರಂಭಿಸಿದ್ದರು. ಬಳಿಕ ಇಬ್ಬರೂ ಪ್ರತ್ಯೇಕವಾಗಿ ನೆಲಸಲು ನಿರ್ಧರಿಸಿದ್ದರು. ಪತಿ ಹಾಗೂ ಮಗನನ್ನು ಬಿಟ್ಟು ಮೋನಿಕಾ ತೆರಳಿದ್ದಾರೆ’ ಎಂದು ದೂರು ನೀಡಲಾಗಿದೆ.
‘ಮೋನಿಕಾ ಅವರು ಮನೆಬಿಟ್ಟು ಹೋಗುವಾಗ ಮನೆಯಲ್ಲಿದ್ದ 160 ಗ್ರಾಂ ಚಿನ್ನಾಭರಣ, ₹1.80 ಲಕ್ಷ ನಗದು ಕಳ್ಳತನ ಮಾಡಿಕೊಂಡು ತೆರಳಿದ್ದಾರೆ. ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದ ಪೊಲೀಸರು, ಎಚ್‌ಎಸ್‌ಆರ್ ಲೇಔಟ್ ಕಾನ್‌ಸ್ಟೆಬಲ್ ರಾಘವೇಂದ್ರ ಮತ್ತು ಮೋನಿಕಾ ಅವರ ಕಥೆಯನ್ನು ಮೇಲಿನ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ನಂತರ, ರಾಘವೇಂದ್ರ ಅವರನ್ನು ಅಮಾನತು ಮಾಡಲಾಗಿದೆ’ ಎಂದು ಮೂಲಗಳು ಹೇಳಿವೆ.
ಪುತ್ರನ ಮೇಲೆ ಹಲ್ಲೆ
‘ನಗದು ಹಾಗೂ ಚಿನ್ನವನ್ನು ಕಳ್ಳತನ ಮಾಡಿಕೊಂಡು ಹೋಗುವ ಜತೆಗೆ ಬೀರುವಿನ ಕೀಯನ್ನು ತೆಗೆದುಕೊಂಡು ಹೋಗಿದ್ದಾರೆ. ಮೋನಿಕಾ ಹಾಗೂ ರಾಘವೇಂದ್ರ ಅವರು ನನ್ನ ಮಗನನ್ನು ಲುಲ್‌ಮಾಲ್‌ಗೆ ಕರೆದೊಯ್ದು ವಿಷಯವನ್ನು ತಂದೆಗೆ ಹೇಳಿದರೆ ಸಾಯಿಸುವುದಾಗಿ ಬೆದರಿಕೆ ಹಾಕಿದ್ದರು. ಎಚ್‌ಎಸ್‌ಆರ್ ಲೇಔಟ್‌ಗೆ ಕರೆದೊಯ್ದು ಅಲ್ಲಿಯೂ ಬೆದರಿಕೆ ಹಾಕಿದ್ದರು ಎಂದು ದೂರುದಾರರು ಆರೋಪಿಸಿ ದೂರು ನೀಡಿದ್ದು, ಅಂಶಗಳನ್ನು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.