ಸಮಾರಂಭದಲ್ಲಿ ಆರ್ಟ್ ಆಫ್ ಗಿವಿಂಗ್ ಸಂಸ್ಥೆಯ ಗುರುಪ್ರಸಾದ್ ಹಾಗೂ ವೆಂಕಟೇಶ್ ಎಂ.ವಿ. ಸಮಾಲೋಚನೆ ನಡೆಸಿದರು. ಎನ್. ಸಂತೋಷ್ ಹೆಗ್ಡೆ ಹಾಗೂ ಸವಿತಕ್ಕ ಭಾಗವಹಿಸಿದ್ದರು
–ಪ್ರಜಾವಾಣಿ ಚಿತ್ರ
ಬೆಂಗಳೂರು: ‘ಶ್ರೀಮಂತಿಕೆ ಹಾಗೂ ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಇಲ್ಲಿ ನೀತಿ ಪಾಠಗಳಿಗೆ ಬೆಲೆಯಿಲ್ಲ, ದುರಾಸೆಗೆ ಮದ್ದಿಲ್ಲ’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.
‘ಆರ್ಟ್ ಆಫ್ ಗಿವಿಂಗ್’ ಸರ್ಕಾರೇತರ ಸಂಸ್ಥೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂತರರಾಷ್ಟ್ರೀಯ ‘ಆರ್ಟ್ ಆಫ್ ಗಿವಿಂಗ್’ ದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡಿದರು.
‘ಸಮಾಜದ ಭಾವನೆ ಬದಲಾಗಿದೆ. ಶ್ರೀಮಂತಿಕೆ, ಅಧಿಕಾರದ ತಿಕ್ಕಾಟ ಹಾಗೂ ಪೈಪೋಟಿಯಿಂದಾಗಿ ಪ್ರಾಮಾಣಿಕತೆಗೆ ಬೆಲೆ ಇಲ್ಲವಾಗಿದೆ. ಹಿಂದೆ ತಪ್ಪು ಮಾಡಿದವರಿಗೆ ಕಾನೂನಿನಡಿ ಶಿಕ್ಷೆಯ ಜತೆಗೆ, ಸಮಾಜವು ಬಹಿಷ್ಕಾರದಂತಹ ಶಿಕ್ಷೆ ವಿಧಿಸುತ್ತಿತ್ತು. ಈಗಿನ ಸಮಾಜದಲ್ಲಿ, ಪ್ರಾಮಾಣಿಕತೆ ಬಗ್ಗೆ ಮಾತನಾಡುವುದೇ ಅಪರಾಧವೆಂಬ ವಾತಾವರಣ ನಿರ್ಮಾಣವಾಗಿದೆ’ ಎಂದರು.
‘ಜಾಮೀನಿನ ಮೇಲೆ ಜೈಲಿನಿಂದ ಹೊರಬರುವ ವ್ಯಕ್ತಿಗೂ ಸೇಬಿನ ಹಾರ ಹಾಕಿ ಬರಮಾಡಿಕೊಳ್ಳುವ ಸಮಾಜದಲ್ಲಿ ನಾವು ಇಂದು ಬದುಕುತ್ತಿದ್ದೇವೆ. ಅಧಿಕಾರದಲ್ಲಿರುವವರ ಸ್ವಾರ್ಥ ಮತ್ತು ದುರಾಸೆಯು ಭ್ರಷ್ಟಾಚಾರವನ್ನು ಪೋಷಿಸುತ್ತಿದೆ. ಅನ್ಯ ಮಾರ್ಗದಿಂದ ಹಣ ಸಂಪಾದಿಸಿದವರು ಆದಾಯ ತೆರಿಗೆ (ಐಟಿ) ಅಧಿಕಾರಿಗಳ, ದರೋಡೆಕೋರರ ಭಯ, ಆತಂಕದಲ್ಲಿಯೇ ಬದುಕುತ್ತಿದ್ದಾರೆ’ ಎಂದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ವೆಂಕಟೇಶ್ ಎಂ.ವಿ., ‘ಇತ್ತೀಚೆಗೆ ಸ್ವಾರ್ಥ ಮನೋಭಾವ ಹೆಚ್ಚಾಗುತ್ತಿದೆ. ಸಾಮಾಜಿಕ ಜಾಲತಾಣದಿಂದ ಮನುಷ್ಯರ ಸಂಬಂಧದ ಕೊಂಡಿ ಕಳಚುತ್ತಿದೆ. ಈಗ ಮನೋ, ಬೌದ್ಧಿಕ ಸಂವಾದ ನಡೆಯಬೇಕು. ಮನಸ್ಸುಗಳ ನಡುವೆ ಶಾಂತಿ ನೆಲೆಸಬೇಕು. ಕಷ್ಟದಲ್ಲಿರುವವರಿಗೆ ನೆರವಾಗಬೇಕು. ಆದರೆ, ಇನ್ನೊಬ್ಬರ ಕಷ್ಟವನ್ನು ಲಾಭಕ್ಕೆ ಬಳಸಿಕೊಳ್ಳಬಾರದು’ ಎಂದರು.
ಇದಕ್ಕೂ ಮೊದಲು ‘ನೆಮ್ಮದಿಯ ಬದುಕಿಗೆ ವಾಸ್ತು ಸಲಹೆಗಳು’ ಎಂಬ ವಿಷಯದ ಬಗ್ಗೆ ವಾಸ್ತು ತಜ್ಞ ಭಾಸ್ಕರ್ ಅವರು ಗೋಷ್ಠಿ ನಡೆಸಿಕೊಟ್ಟರು. ಗಾಯಕಿ ಸವಿತಕ್ಕ ಅವರು ಜಾನಪದ ಗೀತೆಗಳನ್ನು ಹಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.