ADVERTISEMENT

ಮಹಿಳಾ ದಿನಾಚರಣೆ: ಮಮತಾಮಯಿ ನಾರಿ ಚೇತೋಹಾರಿ

ಸಾಧಕ ಮಹಿಳೆಯರಿಗೆ ಸನ್ಮಾನ– ನೃತ್ಯ–ನಾಟಕ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2020, 21:31 IST
Last Updated 8 ಮಾರ್ಚ್ 2020, 21:31 IST
ನಗರದಲ್ಲಿ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ಪೊಲೀಸರು ಮಹಿಳೆಯರಿಗೆ ಗುಲಾಬಿ ನೀಡಿ ಶುಭ ಕೋರಿದರು- (ಎಡಚಿತ್ರ) –ಪ್ರಜಾವಾಣಿ ಚಿತ್ರ.
ನಗರದಲ್ಲಿ ಸಿಟಿ ಮಾರ್ಕೆಟ್ ಸಂಚಾರ ಪೊಲೀಸ್ ಠಾಣೆ ಪೊಲೀಸರು ಮಹಿಳೆಯರಿಗೆ ಗುಲಾಬಿ ನೀಡಿ ಶುಭ ಕೋರಿದರು- (ಎಡಚಿತ್ರ) –ಪ್ರಜಾವಾಣಿ ಚಿತ್ರ.    
""

ಬೆಂಗಳೂರು: ಕಲೆ–ಸಾಹಿತ್ಯ, ವಿಜ್ಞಾನ–ತಂತ್ರಜ್ಞಾನ, ನೃತ್ಯ–ನಾಟಕ, ಆಹಾರ–ಆರೋಗ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಮಹಿಳೆಯ ಸಾಧನೆಯನ್ನು ಸ್ಮರಿಸುವುದರೊಂದಿಗೆ ಜಾಗೃತಿ ಜಾಥಾ, ಆರೋಗ್ಯ ಶಿಬಿರ ಹಮ್ಮಿಕೊಳ್ಳುವ ಮೂಲಕ ಜಾಗೃತಿ ಮೂಡಿಸುವ ಮುಖೇನ ನಗರದಲ್ಲಿ ಭಾನುವಾರ ಮಹಿಳಾ ದಿನವನ್ನು ವಿಭಿನ್ನವಾಗಿ ಆಚರಿಸಲಾಯಿತು.

ವಿಚಾರ ಸಂಕಿರಣಗಳಲ್ಲಿ ಮಹಿಳಾ ಮಾರ್ಗದ ವಿವಿಧ ಮಜಲುಗಳ ಕುರಿತು ಚರ್ಚೆ ನಡೆದರೆ, ಕವಿಗೋಷ್ಠಿಗಳಲ್ಲಿ, ನಾಟಕ, ನೃತ್ಯರೂಪಕ, ಚಿತ್ರಕಲಾ ಪ್ರದರ್ಶನಗಳಲ್ಲಿ ಸ್ತ್ರೀಯ ತ್ಯಾಗದ ಬದುಕಿನ ಜೊತೆಗೆ, ಅವಳ ಭಾವಜಗತ್ತನ್ನು ಅನಾವರಣಗೊಳಿಸಲಾಯಿತು.

ವಿವಿಧ ಆಟಗಳು, ಸೀರೆ ಉಡುವ ಸಂಪ್ರದಾಯದ ಕಾರ್ಯಕ್ರಮಗಳು ಮಹಿಳಾ ದಿನದ ಸಂಭ್ರಮವನ್ನು ಹೆಚ್ಚಿಸಿದವು.

ADVERTISEMENT

ಕನ್ನಡ ಸಾಹಿತ್ಯ ಪರಿಷತ್ತು, ಸಾಹಿತ್ಯ ಅಕಾಡೆಮಿ, ಸುಚಿತ್ರಾ ಫಿಲ್ಮ್‌ ಸೊಸೈಟಿ ಸೇರಿದಂತೆ ಹಲವು ಸಂಘ–ಸಂಸ್ಥೆಗಳು ಮಹಿಳಾ ದಿನದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದವು.

ಜಾಗೃತಿ ನಡಿಗೆ: ಮಹಿಳೆಯರಲ್ಲಿ ಕ್ಯಾನ್ಸರ್‌ ಬಗ್ಗೆ ಜಾಗೃತಿ ಮೂಡಿಸಲು ಆಸ್ಟರ್‌ ಆರ್‌ವಿ ಆಸ್ಪತ್ರೆಯು ಅಮೃತವರ್ಷಿಣಿ ಮಹಿಳಾ ಸಂಘದ ಸಹಯೋಗದೊಂದಿಗೆ 3 ಕಿ.ಮೀ. ದೂರದ ಈ ನಡಿಗೆಯನ್ನು ಆಯೋಜಿಸಿತ್ತು.

ಕ್ಯಾನ್ಸರ್‌ನಿಂದ ಬದುಕುಳಿದವರು, ಬಳಲುತ್ತಿರುವವರು ಮತ್ತು ವೃತ್ತಿಪರರು ಸೇರಿದಂತೆ ಎಲ್ಲ ವರ್ಗದ 250ಕ್ಕೂ ಅಧಿಕ ನಾಗರಿಕರು ಈ ನಡಿಗೆಯಲ್ಲಿ ಪಾಲ್ಗೊಂಡಿದ್ದರು.ಕಾರ್ಯಕ್ರಮದ ಅಂಗವಾಗಿ, ಭಾಗವಹಿಸಿದ ಎಲ್ಲರಿಗೂ ಆಸ್ಪತ್ರೆಯು ವಿಶೇಷ ಸಮಾಲೋಚನೆ ಮತ್ತು ರಿಯಾಯಿತಿ ಪ್ಯಾಕೇಜ್‌ಗಳನ್ನು ಘೋಷಿಸಿತು.‌

ಆಸ್ಟರ್ ಆರ್‌ವಿ ಆಸ್ಪತ್ರೆಯ ಪ್ರಮುಖ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ. ಸುನೀಲ್ ಈಶ್ವರ್, ‘ನಮ್ಮ ದೇಶದಲ್ಲಿ ಸ್ತನ ಮತ್ತು ಗರ್ಭಕಂಠದ ಕ್ಯಾನ್ಸರ್ ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಪತ್ತೆಹಚ್ಚಲಾಗುತ್ತಿದೆ. ಆದರೆ, ವಿದೇಶಗಳಲ್ಲಿ ಕ್ಯಾನ್ಸರ್ ಇನ್ನೂ ಮೊದಲ ಅಥವಾ ಎರಡನೆಯ ಹಂತದಲ್ಲಿದ್ದಾಗಲೇ ಪತ್ತೆಹಚ್ಚಿ ಚಿಕಿತ್ಸೆ ನೀಡಲಾಗುತ್ತದೆ’ ಎಂದರು.

ಪೊಲೀಸರಿಂದ ಪೌರಕಾರ್ಮಿಕರಿಗೆ ಸನ್ಮಾನ
ಕೆ.ಆರ್.ಪುರ:
ಬೆಂಗಳೂರು ನಗರ ಪೊಲೀಸ್, ವೈಟ್ ಫಿಲ್ಡ್ ವಿಭಾಗದ ಕೆ.ಆರ್.ಪುರ ಕಾನೂನು ಸುವ್ಯವಸ್ಥೆ ಮತ್ತು ಸಂಚಾರ ಪೊಲೀಸ್‌ ಠಾಣೆ ವತಿಯಿಂದ ಮಹಿಳಾ ಪೌರ ಕಾರ್ಮಿಕರನ್ನು ಸನ್ಮಾನಿಸಲಾಯಿತು.

ಕೆ.ಆರ್.ಪುರ ಸಂಚಾರ ಠಾಣೆಯಿಂದ ಮದ್ರಾಸ್ ರಸ್ತೆಯ ಮೂಲಕ ಐಟಿಐ ಆವರಣದವರೆಗೆ ವಾಕಥಾನ್ ನಡೆಸಲಾಯಿತು. ಪೌರ ಕಾರ್ಮಿಕರು ಹಾಗೂ ಮಹಿಳಾ ಪೋಲಿಸರು ಜುಂಬಾ ನೃತ್ಯ ಪ್ರದರ್ಶಿಸಿದರು.

ಐವತ್ತಕ್ಕೂ ಹೆಚ್ಚು ಪೌರ ಕಾರ್ಮಿಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಗೌರವ ಸ್ವೀಕರಿಸಿದರು.

ಕೆ.ಆರ್.ಪುರ ಸಂಚಾರ ಠಾಣೆ ಸಬ್ ಇನ್‌ಸ್ಪೆಕ್ಟರ್‌ ಅನಿತಾ, ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ದೇವಿ, ಸಬ್‌ ಇನ್‌ಸ್ಪೆಕ್ಟರ್‌ ಅಂಬರೀಷ್, ಸಂಚಾರ ಸರ್ಕಲ್‌ ಇನ್‌ಸ್ಪೆಕ್ಟರ್‌ ಲೋಕೇಶ್ ಇದ್ದರು.

ಆರೋಗ್ಯ ತಪಾಸಣೆ
ರಾಜರಾಜೇಶ್ವರಿನಗರ: ಶಾಂತಾ ಮಲ್ಟಿ ಸ್ಪೆಷಾಲಿಟಿ ಹಾಸ್ಪಿಟಲ್ ವತಿಯಿಂದ ಮಾಗಡಿ ರಸ್ತೆಯ ಬಿ.ಇ.ಎಲ್. ಲೇಔಟ್‍ನಲ್ಲಿ ಮಹಿಳೆಯರಿಗೆ ಉಚಿತವಾಗಿ ಆರೋಗ್ಯ ತಪಾಸಣೆ ನಡೆಸಲಾಯಿತು.

ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಶಿವರಾಜ್‍ಗೌಡ ನೇತೃತ್ವದಲ್ಲಿ ಹಲವು ವೈದ್ಯರು ಮಹಿಳೆಯರ ಆರೋಗ್ಯ ತಪಾಸಣೆ ಮಾಡಿದರು. ಸಾವಿರಾರು ರೂಪಾಯಿ ಮೌಲ್ಯದ ಔಷಧಿಯನ್ನೂ ಉಚಿತವಾಗಿ ನೀಡಲಾಯಿತು. ನೂರಾರು ಮಹಿಳೆಯರು ಶಿಬಿರದ ಲಾಭ ಪಡೆದುಕೊಂಡರು.

ಡಾ.ಸಚಿನ್ ಕೆ.ಎಸ್, ಡಾ.ಬಿ.ಗುಣಶೀಲ, ಡಾ.ಚೈತನ್ಯಪ್ರಭು, ಡಾ.ಎಂ.ಪಾರ್ವತಿ, ಡಾ.ಮಾಲತಿ, ಡಾ.ಅಶೋಕ್‍ಕುಮಾರ್ ಸಿಂಗ್, ಪರಿವೀಕ್ಷಕಿ ಭವಾನಿ ಇದ್ದರು.

‘ಶೋಷಿತ ಮಹಿಳೆಯರ ಏಳಿಗೆಯೇ ನಿಜವಾದ ಆಚರಣೆ’
ನೆಲಮಂಗಲ: ‘ಶೋಷಿತ ಮಹಿಳೆಯರಿಗೆ ಗೌರವಯುತ ಬದುಕು ಕಲ್ಪಿಸಿದರೆ, ಅದೇ ನಿಜವಾದ ಮಹಿಳಾ ದಿನಾಚರಣೆ’ ಎಂದು ಹಿರಿಯ ರಾಜಕಾರಣಿ ಲೀಲಾದೇವಿ ಆರ್. ಪ್ರಸಾದ್ ಹೇಳಿದರು.

ಪಟ್ಟಣದಲ್ಲಿ ಭಾನುವಾರ ಕರ್ನಾಟಕ ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಶೋಷಿತ ಮಹಿಳೆಯರಿಗೆ ನ್ಯಾಯ ಕೊಡಿಸುವ ಉದ್ದೇಶದಿಂದಲೇ ಮಹಿಳಾ ದಿನ ಆಚರಿಸಲು ಆರಂಭಿಸಲಾಯಿತು’ ಎಂದರು.

ರಾಜ್ಯದ ವಿವಿಧ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರಿಗೆ ಸನ್ಮಾನಿಸಲಾಯಿತು. ದಾಸರಹಳ್ಳಿ ವಿಧಾನಸಭಾ ಕ್ಷೇತ್ರ ಕನ್ನಡ ಸಾಹಿತ್ಯ ಪರಿಷತ್‌ ಘಟಕದ ಅಧ್ಯಕ್ಷ ವೈ.ಬಿ.ಜಯದೇವ್,ಚಕ್ರವರ್ತಿ ಪ್ರಭುಕುಮಾರ ಶಿವಾಚಾರ್ಯ ಸ್ವಾಮೀಜಿ, ಪಾಲಿಕೆ ಸದಸ್ಯೆ ಉಮಾದೇವಿ ನಾಗರಾಜು, ಟ್ರಸ್ಟ್ ಅಧ್ಯಕ್ಷ ಹನುಮಂತಪ್ಪ ಮೇಡೆಗಾರ, ಪದಾಧಿಕಾರಿಗಳಾದ ಬಸವನಗೌಡ, ಶರಣಯ್ಯ ಜೇಡಿಮಠ, ಅಂಬಣ್ಣ ಮುಡಬಿ, ಸರೇಶ್ ಬಿರಾದಾರ್, ಸುಜಾತಾ ಮೇಲೇಗೌಡ, ಗಿರಿಜಮ್ಮ, ಸುಧಾ ಶಿವರಾಜು ಇದ್ದರು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಜನಸ್ಪಂದನ ಟ್ರಸ್ಟ್ ಆಯೋಜಿಸಿದ್ದ ಸಮಾರಂಭದಲ್ಲಿ ಹಿರಿಯ ರಾಜಕಾರಣಿ ಲೀಲಾದೇವಿ ಆರ್. ಪ್ರಸಾದ್ ಸನ್ಮಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.