ಪೀಣ್ಯ ದಾಸರಹಳ್ಳಿ: ‘ಮಹಿಳೆಯರು ಸರಳ, ಸ್ವಾವಲಂಬನೆಯ ಜೀವನಶೈಲಿಗೆ ಒತ್ತು ನೀಡಿದರೆ ಕುಟುಂಬ ಹಾಗೂ ಸಮಾಜದಲ್ಲಿ ಸಮೃದ್ಧಿ ನೆಲೆಸಲಿದೆ’ ಎಂದು ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಎಸ್. ಮುನಿರಾಜು ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಕಮ್ಮಗೊಂಡನಹಳ್ಳಿಯ ನವಶಕ್ತಿ ಮಹಿಳಾ ಸಂಘಟನೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧನೆ ಮಾಡಿದ ಮಹಿಳಾ ಸಾಧಕರಿಗೆ ಅಭಿನಂದಿಸಿ ಅವರು ಮಾತನಾಡಿದರು.
‘ಬೆಲೆ ಬಾಳುವ ವಸ್ತ್ರ ಹಾಗೂ ಒಡವೆ ಧರಿಸಿದರೆ ಸಮಾಜದಲ್ಲಿ ಉತ್ತಮ ಸ್ಥಾನ ಮಾನ ಲಭಿಸುವುದಿಲ್ಲ. ಸಾಧನೆಯಿಂದ ಮಹಿಳೆಯರಿಗೆ ಘನತೆ ಲಭಿಸುತ್ತದೆ. ಮಹಿಳೆಯರು ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಮಸ್ಯೆಯನ್ನು ಸಮರ್ಥವಾಗಿ ನಿಭಾಯಿಸುವ ಮನೋಬಲ ರೂಢಿಸಿಕೊಳ್ಳಬೇಕು’ ಎಂದರು.
ಪಾಲಿಕೆ ಮಾಜಿ ಸದಸ್ಯ ಕೆ.ನಾಗಭೂಷಣ್ ಮಾತನಾಡಿ, ‘ಮಹಿಳೆ ಸ್ವಾವಲಂಬಿಯಾದರೆ ಕುಟುಂಬದ ಏಳಿಗೆಯ ಜತೆಗೆ ದೇಶದ ಪ್ರಗತಿಯೂ ಸಾಧ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಿರಂತರವಾಗಿ ಕ್ಷೇತ್ರ ವ್ಯಾಪ್ತಿಯಲ್ಲಿ ಸಬಲೀಕರಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಹಿಳೆಯರಿಗೆ ಬದುಕು ಕಟ್ಟಿಕೊಳ್ಳಲು ಅಗತ್ಯ ನೆರವು ನೀಡಲಾಗುತ್ತಿದೆ. ಮಹಿಳೆಯರ ಸುರಕ್ಷತೆ ಹಾಗೂ ಸುಭದ್ರತೆಗಾಗಿ ದಿಟ್ಟ ಕ್ರಮಗಳನ್ನು ಕೈಗೊಂಡಿರುವ ಕಾರಣ ಕ್ಷೇತ್ರದಲ್ಲಿ ಲಕ್ಷಾಂತರ ಮಹಿಳೆಯರು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ನಿರಾತಂಕವಾಗಿ ಉದ್ಯೋಗ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.