ಬೆಂಗಳೂರು: ‘ಮಹಿಳೆಯರಿಗೆ ಸಂಸತ್ತು, ವಿಧಾನಸಭೆಗಳ ಜೊತೆಗೆ, ವಿಶ್ವವಿದ್ಯಾಲಯಗಳ ಕುಲಪತಿ ಮತ್ತು ಕುಲಸಚಿವ ಹುದ್ದೆಗಳಲ್ಲೂ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕು’ ಎಂದು ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಎಸ್.ಲತಾಕುಮಾರಿ ಎಂದು ಹೇಳಿದರು.
ಬೆಂಗಳೂರು ನಗರ ವಿಶ್ವವಿದ್ಯಾಲಯ (ಬಿಸಿಯು) ಶುಕ್ರವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಮಹಿಳೆಯರಲ್ಲಿ ಉನ್ನತ ಶಿಕ್ಷಣ ಪಡೆಯುವವರ ಪ್ರಮಾಣ ಕಡಿಮೆ. ಇಂಥ ಸಮಯದಲ್ಲಿ ಬಿಸಿಯುನಲ್ಲಿ ಹೆಣ್ಣುಮಕ್ಕಳಿಗೆ ಹೆಚ್ಚಿನ ಉತ್ತೇಜನ ನೀಡುತ್ತಿರುವುದು ಉತ್ತಮ ಬೆಳವಣಿಗೆ’ ಎಂದು ಪ್ರಶಂಸಿಸಿದರು.
ಲೈಂಗಿಕ ಶಿಕ್ಷಣ ತಜ್ಞೆ ಡಾ. ಪದ್ಮಿನಿ ಪ್ರಸಾದ್ ಮಾತನಾಡಿ, ‘ಹೆಣ್ಣು ಭ್ರೂಣ ಹತ್ಯೆಯಂತಹ ಕ್ರೌರ್ಯವನ್ನು ಎಲ್ಲರೂ ಖಂಡಿಸಬೇಕು. ಇಂಥ ಕೃತ್ಯದ ಮೂಲಕ ಹುಟ್ಟುವ ಮೊದಲೇ ಮಹಿಳೆಗೆ ಮರಣ ದಂಡನೆ ವಿಧಿಸುವಂತಹ ಅಮಾನವೀಯ ಪ್ರವೃತ್ತಿಗೆ ಸಂಪೂರ್ಣ ವಿರಾಮ ಹಾಕಬೇಕು’ ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಿಸಿಯ ಕುಲಪತಿ ಪ್ರೊ. ಲಿಂಗರಾಜ ಗಾಂಧಿ ಮಾತನಾಡಿ, ‘ ಸ್ತ್ರೀ ಸಬಲೀಕರಣದ ಗುರಿ ಸಾಧನೆಗೆ ಶಿಕ್ಷಣ ಪೂರಕವಾಗಬಲ್ಲದು’ ಎಂದು ಪ್ರತಿಪಾದಿಸಿದರು.
‘ನಮ್ಮ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಪೈಕಿ ಹೆಣ್ಣುಮಕ್ಕಳೇ ಅಧಿಕವಾಗಿದ್ದು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಲ್ಲೂ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ’ ಎಂದರು.
ಬೆಂಗಳೂರು ವಕೀಲರ ಸಂಘದ ಖಜಾಂಚಿ ಶ್ವೇತಾ ರವಿಶಂಕರ್ ಮಾತನಾಡಿದರು. ಕುಲಸಚಿವರಾದ ಟಿ.ಜವರೇಗೌಡ, ಪ್ರೊ.ಬಿ.ರಮೇಶ್ ಉಪಸ್ಥಿತರಿದ್ದರು.
ಮೂವರು ಅತಿಥಿಗಳು ಹಾಗೂ ಬಿಸಿಯು ಅಧೀಕ್ಷಕಿ ಪದ್ಮಮ್ಮ ಅವರನ್ನು ಸನ್ಮಾನಿಸಲಾಯಿತು. ಮಹಿಳಾ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.