ADVERTISEMENT

ಅಂತರರಾಜ್ಯ ಕಳ್ಳನ ಬಂಧನ; ₹80 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2021, 9:04 IST
Last Updated 30 ಜೂನ್ 2021, 9:04 IST
ಅಂತರರಾಜ್ಯ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ
ಅಂತರರಾಜ್ಯ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ   

ಬೆಂಗಳೂರು: ದುಬಾರಿ ಕಾರುಗಳಲ್ಲಿ ಬಂದು ನಗರದ ಮನೆಗಳಲ್ಲಿ ಚಿನ್ನಾಭರಣ ಹಾಗೂ ನಗದು ಕದಿಯುತ್ತಿದ್ದ ಅಂತರರಾಜ್ಯ ಕಳ್ಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಸವರಾಜ್ ಅಲಿಯಾಸ್‌ ಜಂಗ್ಲಿ ಬಂಧಿತ ಆರೋಪಿ.

‘ಪೊಲೀಸರ ಕಣ್ತಪ್ಪಿಸಿ ಕಳ್ಳತನ ಮಾಡಲು ವಿವಿಧ ಕಾರುಗಳನ್ನು ಬಳಸುತ್ತಿದ್ದ. ಕಳ್ಳತನ ಮಾಡಿ ಕಾರಿನಲ್ಲಿ ತೆಲಂಗಾಣ, ತಮಿಳುನಾಡಿಗೆ ಪ್ರಯಾಣಿಸುತ್ತಿದ್ದ. ಬೆಂಗಳೂರು ಹಾಗೂ ಹೈದರಾಬಾದ್‌ಗಳಲ್ಲಿ ಮನೆ ಕಳ್ಳತನ ಮಾಡುತ್ತಿದ್ದ. ಅದರಿಂದ ಬಂದ ಹಣದಲ್ಲಿ ಮೋಜಿನ ಜೀವನ ನಡೆಸುತ್ತಿದ್ದ’ ಎಂದು ಪೊಲೀಸರು ತಿಳಿಸಿದರು.

‘ಪ್ರಕರಣವೊಂದರಲ್ಲಿ ಈತನನ್ನು ಹಿಡಿಯಲು ಮುಂದಾದಾಗ, ಹೈದರಾಬಾದ್‌ಗೆ ತೆರಳಿ ತಲೆಮರೆಸಿಕೊಂಡಿದ್ದ. ಬಸವರಾಜ್‌ನನ್ನು ಹೈದರಾಬಾದ್‌ನಲ್ಲಿ ಬಂಧಿಸಿ, ಬೆಂಗಳೂರಿಗೆ ಕರೆತರಲಾಗಿದೆ’ ಎಂದೂ ಹೇಳಿದರು.’

ADVERTISEMENT

ಆರೋಪಿ ವಿರುದ್ಧ ಬಿಡದಿ, ಕೊಡಿಗೇಹಳ್ಳಿ, ಸಿ.ಕೆ. ಅಚ್ಚುಕಟ್ಟು, ವಿಜಯನಗರ, ಗಿರಿನಗರ, ಕಾಮಾಕ್ಷಿಪಾಳ್ಯ, ವಿಜಯನಗರ, ಹೈದರಾಬಾದ್, ತಮಿಳುನಾಡಿನ ಹೊಸೂರು ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು.

ಸಿಸಿಬಿ ಜಂಟಿ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ, ‘ಬಂಧಿತನಿಂದ ₹80 ಲಕ್ಷ ಮೌಲ್ಯದ 1.3 ಕೆ.ಜಿ. ಚಿನ್ನಾಭರಣ, ₹1.50 ಲಕ್ಷದ ನಗದು ಹಾಗೂ ಎರಡು ಕಾರುಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿ 2014ರಿಂದ ಕೃತ್ಯಗಳಲ್ಲಿ ತೊಡಗಿದ್ದು, ಈತನ ಬಂಧನದಿಂದ ಕೆ.ಆರ್. ಪುರ, ಮಾಗಡಿ ರಸ್ತೆ, ಸುಬ್ರಹ್ಮಣ್ಯಪುರ, ಹೆಬ್ಬಾಳ, ಬ್ಯಾಡರಹಳ್ಳಿ, ಎಚ್‌.ಎಸ್‌.ಆರ್‌ ಬಡಾವಣೆ ಠಾಣೆಗಳಲ್ಲಿ 10 ಪ್ರಕರಣಗಳು ಪತ್ತೆಯಾಗಿವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.