ಪಿಸ್ತೂಲ್
ಬೆಂಗಳೂರು: ಎಎಸ್‌ಐ ಒಬ್ಬರು ಸಾರ್ವಜನಿಕ ಸ್ಥಳದಲ್ಲಿ ಪಿಸ್ತೂಲ್ ಹಿಡಿದು ಬೆದರಿಕೆ ಹಾಕಿದ್ದ ಆರೋಪವಿದ್ದು, ಈ ಸಂಬಂಧ ಹಿರಿಯ ಅಧಿಕಾರಿಗಳಿಗೆ ದೂರು ನೀಡಲಾಗಿದೆ. ಈ ಸಂಬಂಧ ಪೊಲೀಸ್ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
‘ಮಡಿವಾಳ ಎಎಸ್‌ಐ ಕುಮಾರ್ ಮೇಲೆ ಆರೋಪ ಇದೆ. ಘಟನೆಯ ಸಂಬಂಧ ಮಡಿವಾಳ ಉಪ ವಿಭಾಗದ ಎಸಿಪಿ ತನಿಖೆ ಕೈಗೊಂಡಿದ್ದಾರೆ’ ಎಂದು ಗೊತ್ತಾಗಿದೆ. ಮೇ 23ರ ಮಧ್ಯರಾತ್ರಿ 1.35ಕ್ಕೆ ಮಡಿವಾಳದ ಜಕ್ಕಸಂದ್ರದ ಖಾಸಗಿ ಹೋಟೆಲ್‌ನಲ್ಲಿ ಘಟನೆ ನಡೆದಿದೆ.
‘ಮಡಿವಾಳದ ಹೋಟೆಲ್‌ನಲ್ಲಿ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಮಧ್ಯೆ ಸಂಬಳದ ವಿಚಾರಕ್ಕೆ ಮೂರು ತಿಂಗಳಿಂದ ಗಲಾಟೆ ನಡೆಯುತ್ತಿತ್ತು. ಗಲಾಟೆ ಸಂಬಂಧ ಕಾರ್ಮಿಕನೊಬ್ಬ ಪೊಲೀಸ್ ಕಂಟ್ರೋಲ್‌ಗೆ ರೂಂಗೆ ಕರೆ ಮಾಡಿದ್ದ. ಕರೆ ಆಧರಿಸಿ ಸ್ಥಳಕ್ಕೆ ಹೋಗಿ ವಿಚಾರಿಸಿದ್ದೇನೆ. ಪಿಸ್ತೂಲ್‌ನ ಪೌಚ್ ಕಿತ್ತುಹೋಗಿತ್ತು. ಕೈನಲ್ಲಿ ಪಿಸ್ತೂಲ್ ಹಿಡಿದುಕೊಂಡು ಮಾಹಿತಿ ಪಡೆದಿದ್ದೇನೆ’ ಎಂದು ಪ್ರಾಥಮಿಕ ತನಿಖೆ ವೇಳೆ ಕುಮಾರ್ ಹೇಳಿಕೆ ನೀಡಿದ್ದಾರೆ.
ತನಿಖೆ ವೇಳೆ ಪೊಲೀಸ್ ಠಾಣೆಗೆ ಮತ್ತು ಪೊಲೀಸರ ಸಹಾಯವಾಣಿಗೆ ಯಾವುದೇ ಕರೆ ಬಂದಿರಲಿಲ್ಲ ಎಂಬುದು ಗೊತ್ತಾಗಿದೆ. ತನಿಖೆ ಪೂರ್ಣವಾದ ಬಳಿಕ ಘಟನೆಯ ಪೂರ್ಣ ಮಾಹಿತಿ ನೀಡಲಾಗುವುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹೋಟೆಲ್‌ಗೆ ಬಂದಿದ್ದ ಎಎಸ್‌ಐ ಪಿಸ್ತೂಲ್ ಹಿಡಿದು ಓಡಾಡಿರುವ ದೃಶ್ಯ ಹೋಟೆಲ್‌ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹೋಟೆಲ್ ಸಿಬ್ಬಂದಿ ಈ ದೃಶ್ಯವನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಯಬಿಟ್ಟಿದ್ದಾರೆ.
‘ಪೊಲೀಸ್ ಶಿಷ್ಟಾಚಾರದ ಪ್ರಕಾರ ಪಿಸ್ತೂಲ್ ಹಿಡಿದುಕೊಂಡು ಸಾರ್ವಜನಿಕವಾಗಿ ಓಡಾಡುವಂತಿಲ್ಲ. ಗಲಾಟೆ ನಡೆದ ಸಂದರ್ಭದಲ್ಲಿ ಪಿಸ್ತೂಲ್ ಬಳಸಿ ಕೇವಲ ಗಾಳಿಯಲ್ಲಿ ಗುಂಡು ಹಾರಿಸಬಹುದು. ಘಟನೆ ಕುರಿತು ತನಿಖೆ ನಡೆಸಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.