ವಿಧಾನಸೌಧ
ಬೆಂಗಳೂರು: ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಣಕಾಸು ಅವ್ಯವಹಾರ ಮತ್ತು ಅಧಿಕಾರ ದುರ್ಬಳಕೆ ಆರೋಪಗಳ ತನಿಖೆಗೆ ದ್ವಿಸದಸ್ಯ ಸಮಿತಿ ರಚಿಸಿ ಸಮಾಜ ಕಲ್ಯಾಣ ಇಲಾಖೆ ಬುಧವಾರ ಆದೇಶ ಹೊರಡಿಸಿದೆ.
ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪ ಯೋಜನೆ (ಟಿಎಸ್‌ಪಿ) ನಿರ್ದೇಶಕಿ ಊರ್ಮಿಳಾ ಮತ್ತು ಕರ್ನಾಟಕ ವಸತಿ ಶಿಕ್ಷಣ ಸಂಘದ (ಕ್ರೈಸ್) ಮುಖ್ಯ ಲೆಕ್ಕಾಧಿಕಾರಿ ಗಂಗಾಧರ್ ತನಿಖಾ ಸಮಿತಿಯ ಸದಸ್ಯರಾಗಿದ್ದಾರೆ. ‘ತಾಂಡಾ ಅಭಿವೃದ್ಧಿ ನಿಗಮ: ಅಕ್ರಮದ ಘಾಟು’ ಶೀರ್ಷಿಕೆಯಡಿ ‘ಪ್ರಜಾವಾಣಿ’ಯ ಜೂನ್ 23ರ ಸಂಚಿಕೆಯಲ್ಲಿ ವರದಿ ಪ್ರಕಟವಾಗಿತ್ತು. ವರದಿ ಕುರಿತು ಆದೇಶದಲ್ಲಿ ಉಲ್ಲೇಖಿಸಿದ್ದು, ತನಿಖೆ ಪೂರ್ಣಗೊಳಿಸಿ 30 ದಿನಗಳೊಳಗೆ ವರದಿ ಸಲ್ಲಿಸುವಂತೆ ಗಡುವು ವಿಧಿಸಲಾಗಿದೆ.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ ನಾಯ್ಕ್ ವಿರುದ್ಧ ನಿಗಮದ ಹಿಂದಿನ ಲೆಕ್ಕಾಧಿಕಾರಿ ಸುರೇಶ್ ನಾಯ್ಕ್ ಬರೆದಿದ್ದ ಪತ್ರದಲ್ಲಿರುವ 2023ರ ನವೆಂಬರ್‌ನಲ್ಲಿ ಬರೆದಿದ್ದ ಪತ್ರದಲ್ಲಿನ ಆರೋಪಗಳ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಸೇವಾಲಾಲ್ ಜಯಂತಿಯಲ್ಲಿ ಜೈವಿಕ ಶೌಚಾಲಯ ಬಳಕೆ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ದುರ್ಬಳಕೆ, ಲೆಕ್ಕಪರಿಶೋಧನೆಯಲ್ಲಿನ ಅಕ್ರಮ, ಕೇಂದ್ರ ಪುರಸ್ಕೃತ ಯೋಜನೆಯ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಿರುವುದು, ಕಾಮಗಾರಿಗಳ ಪಟ್ಟಿ ಅನುಮೋದನೆಯಲ್ಲಿ ನಿಯಮ ಉಲ್ಲಂಘನೆ, ತುಂಡು ಗುತ್ತಿಗೆ ಆರೋಪಗಳ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.