
ಬೆಂಗಳೂರು: ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಯೋಗ ಗುರುಗಳಿಗೆ ₹98.42 ಲಕ್ಷ ವಂಚಿಸಿರುವ ದಂಪತಿಯ ವಿರುದ್ಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ವಿಲ್ಸನ್ ಗಾರ್ಡನ್ ನಿವಾಸಿ ಅಂಕಿತ್ ಭಾವುವಾಲಾ ಅವರ ದೂರು ಆಧರಿಸಿ ತಮಿಳುನಾಡಿನ ಯುಗದೇವ್ ಹಾಗೂ ಅವರ ಪತ್ನಿ ಕೀರ್ತಿಪ್ರಿಯಾ ಅವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದರು.
‘ಅಂಕಿತ್ ಭಾವುವಾಲಾ ಹಾಗೂ ಪೊನ್ನಮ್ಮ ಯೋಗ ಸಾಧಕರಾಗಿದ್ದು, ‘ಯೋಗರುದ್ರ ಸಂಸ್ಥೆ’ಯಲ್ಲಿ ಪಾಲುದಾರರಾಗಿದ್ದಾರೆ. 2023ರಲ್ಲಿ ಯುಗದೇವ್ ಮತ್ತು ಅವರ ಪತ್ನಿ ಕೀರ್ತಿಪ್ರಿಯಾ ಪರಿಚಯ ಆಗಿದ್ದರು. ತಾವು ಯೋಗ ಮತ್ತು ಅಧ್ಯಾತ್ಮ ಕ್ಷೇತ್ರದಲ್ಲಿ ಆಸ್ತಕಿ ಹೊಂದಿರುವುದಾಗಿ ಹೇಳಿದ್ದರು. ತಾವು ಸಹ ಯೋಗ ಶಿಕ್ಷಕರು ಎಂದು ಪರಿಚಯಿಸಿಕೊಂಡಿದ್ದರು. ಜೆಬಿಡಿ ಫೈನಾನ್ಶಿಯಲ್ ಸಲ್ಯೂಷನ್ಸ್ ಕಂಪನಿ ನಡೆಸುತ್ತಿರುವುದಾಗಿಯೂ ಮಾಹಿತಿ ನೀಡಿದ್ದರು. ಹರಿಹರನ್ ಎಂಬುವವರು ಹಣಕಾಸು ವಿಭಾಗದ ಮುಖ್ಯಸ್ಥರಾಗಿದ್ದಾರೆ ಎಂದು ಹೇಳಿ ಕೆಲವು ಪ್ರಮಾಣಪತ್ರಗಳನ್ನೂ ತೋರಿಸಿದ್ದರು. ಜೆಬಿಡಿ ವೆಬ್‌ಸೈಟ್ ಮೂಲಕ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಬರಲಿದೆಯೆಂದು ಹೇಳಿದ್ದರು’ ಎಂದು ಪೊಲೀಸರು ಹೇಳಿದರು.
'ಅಂಕಿತ್ ಭಾವುವಾಲಾ ಅವರು ಜೆಬಿಡಿ ವೆಬ್‌ಸೈಟ್ ಅನ್ನು ನೋಡಿ ಅದು ವೃತ್ತಿಪರತೆಯಿಂದ ಕೂಡಿರಬಹುದು ಎಂದು ಭಾವಿಸಿದ್ದರು. ಯುಗದೇವ್ ಅವರ ಬ್ಯಾಂಕ್ ಖಾತೆಗೆ ₹39.20 ಲಕ್ಷ ಹೂಡಿಕೆ ಮಾಡಿದರೆ, ಪೊನ್ನಮ್ಮ, ಸುಬ್ಬಯ್ಯ ಹಾಗೂ ಯೋಗರುದ್ರ ಸಂಸ್ಥೆಯಿಂದ ₹59.22 ಲಕ್ಷ ವರ್ಗಾವಣೆ ಮಾಡಲಾಗಿತ್ತು. ಮೊದಲು ಹೂಡಿಕೆಗೆ ಬಡ್ಡಿ ರೂಪದಲ್ಲಿ ಸ್ವಲ್ಪ ಹಣ ನೀಡುತ್ತಿದ್ದ ಯುಗದೇವ್ ನಂತರ ಬಡ್ಡಿ ಹಣ ಕೊಟ್ಟಿರಲಿಲ್ಲ. ಕೆಲವು ತಿಂಗಳಿನಿಂದ ಯುಗದೇವ್ ಮತ್ತು ಅವರ ಪತ್ನಿ ದೂರುದಾರರ ಸಂಪರ್ಕಕ್ಕೆ ಸಿಕ್ಕಿಲ್ಲ. ಆರೋಪಿಗಳು ಒಟ್ಟು ₹98.42 ಲಕ್ಷ ವಂಚಿಸಿದ್ದಾರೆ’ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.