ADVERTISEMENT

ಮೆಟ್ರೊ ಕಾಮಗಾರಿ: ಮರ ಕಡಿಯಲು ಆಕ್ಷೇಪಣೆ ಆಹ್ವಾನ

ಆರ್‌.ವಿ. ರಸ್ತೆ– ಎಚ್‌ಎಸ್‌ಆರ್‌ ಬಡಾವಣೆ ಮಾರ್ಗದ ನಿಲ್ದಾಣ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2020, 19:48 IST
Last Updated 23 ನವೆಂಬರ್ 2020, 19:48 IST
ನಮ್ಮ ಮೆಟ್ರೊ ಲೋಗೊ
ನಮ್ಮ ಮೆಟ್ರೊ ಲೋಗೊ   

ಬೆಂಗಳೂರು: ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂ ಆರ್‌ಸಿಎಲ್‌) ಆರ್‌.ವಿ. ರಸ್ತೆ– ಎಚ್‌ಎಸ್‌ಆರ್‌ ಬಡಾವಣೆ ನಡುವೆ ನಿರ್ಮಿಸಲಿರುವ ರೀಚ್‌–5 ಮಾರ್ಗದಲ್ಲಿ ‘ನಮ್ಮ ಮೆಟ್ರೊ’ ನಿಲ್ದಾಣಗಳ ಕಾಮಗಾರಿ ಸಲುವಾಗಿ 17 ಮರಗಳನ್ನು ತೆರವುಗೊಳಿಸಬೇಕಿರುತ್ತದೆ. ಈ ಕುರಿತು ಬಿಬಿಎಂಪಿಯ ಅರಣ್ಯ ವಿಭಾಗವು ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿದೆ.

‘ಮೆಟ್ರೊ ನಿಲ್ದಾಣ ನಿರ್ಮಾಣಕ್ಕಾಗಿ ಈಸ್ಟ್‌ ಎಂಡ್‌ ರಸ್ತೆ ಮತ್ತು ಕೇಂದ್ರ ಸಿಲ್ಕ್‌ ಬೋರ್ಡ್‌ ಜಂಕ್ಷನ್‌ ನಡುವೆ 2.66 ಕಿ.ಮೀ ಉದ್ದದಷ್ಟು ಜಾಗದಲ್ಲಿ ಮಾರೇನಹಳ್ಳಿ ರಸ್ತೆ ಅಕ್ಕ ಪಕ್ಕ ಮರಗಳನ್ನು ತೆರವುಗೊಳಿಸಬೇಕಿದೆ. ನಿರ್ಮಾಣ ಪ್ರದೇಶಗಳಲ್ಲಿ ಒಟ್ಟು 147 ಮರಗಳಿವೆ. ಅವುಗಳಲ್ಲಿ 17 ಮರಗಳನ್ನು ಹಾಗೆಯೇ ಉಳಿಸಿಕೊಂಡು 17 ಮರ ಗಳನ್ನು ತೆರವುಗೊಳಿಸಲು ನಿರ್ಧರಿಸಿದ್ದೇವೆ’ ಎಂದು ಬಿಬಿಎಂಪಿಯ ಅರಣ್ಯಾಧಿಕಾರಿ ಚಿದಾನಂದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಮರಗಳೆಲ್ಲವೂ ಹಳೆಯವು. ಅವುಗಳ ಸ್ಥಳಾಂತರ ಅಸಾಧ್ಯ. ಹೆಚ್ಚಿನವು ಗುಲ್‌ ಮೊಹರ್‌ ಜಾತಿಯ ಮರಗಳು’ ಎಂದರು.

ADVERTISEMENT

ಈ ಮರಗಳ ಮಾಹಿತಿಯನ್ನು ಬಿಬಿಎಂಪಿ ವೆಬ್‌ಸೈಟ್‌ನಲ್ಲಿ (https://bbmp.gov.in) ಪ್ರಕಟಿಸಲಿದ್ದೇವೆ. 10 ದಿನಗಳ ಒಳಗೆ ಸಾರ್ವಜನಿಕರು ಲಿಖಿತವಾಗಿ ಅಥವಾ ಇ–ಮೇಲ್‌ ಮೂಲಕ (dcfbbmp12@gmail.com) ಆಕ್ಷೇಪಣೆ ಸಲ್ಲಿಸಬಹುದು ಎಂದರು. ವಿಳಾಸ: ಡಿಸಿಎಫ್‌ (ವೃಕ್ಷ ಅಧಿಕಾರಿ, ಬಿಬಿಎಂಪಿ). ನೆಲ ಮಹಡಿ, ಆನೆಕ್ಸ್‌ –3 ಕಟ್ಟಡ, ಎನ್‌.ಆರ್‌.ವೃತ್ತ, ಬೆಂಗಳೂರು– 560001

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.