ADVERTISEMENT

ಕಬ್ಬಿಣ ಅದಿರು ರಫ್ತು ನಿಷೇಧ ತೆರವು: ‘ಸುಪ್ರೀಂ’ಗೆ ಮೇಲ್ಮನವಿ

​ಪ್ರಜಾವಾಣಿ ವಾರ್ತೆ
Published 26 ಮೇ 2021, 21:56 IST
Last Updated 26 ಮೇ 2021, 21:56 IST
   

ಬೆಂಗಳೂರು: ರಾಜ್ಯದಿಂದ ವಿದೇಶಕ್ಕೆ ಕಬ್ಬಿಣದ ಅದಿರು ರಫ್ತು ಮಾಡಲು ಕೇಂದ್ರ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿರುವ ಕಾರಣ ಸುಪ್ರೀಂಕೋರ್ಟ್‌ ವಿಧಿಸಿರುವ ನಿಷೇಧವನ್ನು ತೆರವುಗೊಳಿಸುವಂತೆ ಮೇಲ್ಮನವಿ ಸಲ್ಲಿಸಲು ಗಣಿ ಮತ್ತು ಭೂವಿಜ್ಞಾನ ಇಲಾಖೆ ತೀರ್ಮಾನಿಸಿದೆ.

ಕೇಂದ್ರ ಗಣಿ ಸಚಿವ ಪ್ರಲ್ಹಾದ ಜೋಶಿ ಜತೆ ಬುಧವಾರ ವರ್ಚುವಲ್ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗಣಿ ಸಚಿವ ಮುರುಗೇಶ ನಿರಾಣಿ ಈ ವಿಷಯ ತಿಳಿಸಿದರು.

ವಿದೇಶಗಳಿಗೆ ಕಬ್ಬಿಣ ಅದಿರು ರಫ್ತು ಮಾಡುವ ಸಂಬಂಧ ಕೇಂದ್ರ ಸರ್ಕಾರದ ಅಭಿಪ್ರಾಯ ಕೇಳಲಾಯಿತು. ತಮ್ಮ ಕಡೆಯಿಂದ ಯಾವುದೇ ಆಕ್ಷೇಪ ಇಲ್ಲ ಎಂದು ಅಭಿಪ್ರಾಯ ನೀಡಿದ್ದಾಗಿ ನಿರಾಣಿ ತಿಳಿಸಿದರು.

ADVERTISEMENT

‘ಬೇರೆ ಯಾವುದೇ ರಾಜ್ಯಗಳ ಮೇಲೂ ಕಬ್ಬಿಣ ರಫ್ತಿಗೆ ಸಂಬಂಧಿಸಿದಂತೆ ನಿಷೇಧ ಹೇರಿಲ್ಲ. ನಮ್ಮ ರಾಜ್ಯಕ್ಕೆ ಮಾತ್ರ ನಿಷೇಧ ವಿಧಿಸಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಬರುತ್ತಿದ್ದ ವರಮಾನ ನಿಂತು ಹೋಗಿದೆ. ಇದೀಗ ಕೇಂದ್ರ ಸರ್ಕಾರವೂ ಸಂಪೂರ್ಣ ಸಹಕಾರ ನೀಡಲು ಮುಂದಾಗಿದೆ. ನ್ಯಾಯಾಲಯದಲ್ಲಿ ಕಾನೂನಿನ ನೆರವು ನೀಡುವುದಾಗಿ ಜೋಶಿ ತಿಳಿಸಿದ್ದಾರೆ. ನಮ್ಮ ನಿಲುವನ್ನು ನ್ಯಾಯಾಲಯ ಒಪ್ಪುವ ಸಾಧ್ಯತೆ ಇದೆ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ದಿನದ 24 ಗಂಟೆ ಗಣಿಗಾರಿಕೆ ನಡೆಸಲು ಅವಕಾಶ ಇದೆ. ಆದರೆ ಸಾಗಾಣಿಕೆಗೆ ಮಾತ್ರ 12 ಗಂಟೆಗಳ ಅವಕಾಶ ನೀಡಲಾಗಿದೆ. ಇದರಿಂದ ಉದ್ಯಮಗಳಿಗೆ ಸಮಸ್ಯೆ ಆಗಿದೆ ಎಂದು ಮನವಿ ಬಂದಿದೆ. ಈ ಬಗ್ಗೆ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈಗ 35 ದಶಲಕ್ಷ ಮೆಟ್ರಿಕ್‌ ಟನ್‌ ಕಬ್ಬಿಣದ ಅದಿರು ಉತ್ಪಾದನೆ ಆಗುತ್ತಿದೆ. 2030 ರ ವೇಳೆಗೆ 70 ದಶಲಕ್ಷ ಮೆಟ್ರಿಕ್‌ ಟನ್‌ಗೆ ಕೊಂಡೊಯ್ಯುವ ಗುರಿ ಹೊಂದಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.