ADVERTISEMENT

ಬೆಂಗಳೂರು: ‘ಐಎಸ್‌ಬಿ’ ನಿವೃತ್ತ ಪ್ರಾಧ್ಯಾಪಕನ ಮೃತದೇಹ ಪತ್ತೆ

* ಕತ್ತು, ಕೈ ಮೇಲೆ ಚಾಕು ಇರಿತದ ಗುರುತು * ಕೊಲೆ ಶಂಕೆಯಡಿ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2021, 1:46 IST
Last Updated 26 ನವೆಂಬರ್ 2021, 1:46 IST
ಡಾ. ಎ.ಕೆ. ರಾವ್
ಡಾ. ಎ.ಕೆ. ರಾವ್   

ಬೆಂಗಳೂರು: ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ (ಐಎಸ್‌ಬಿ) ನಿವೃತ್ತ ಪ್ರಾಧ್ಯಾಪಕ ಡಾ. ಎ.ಕೆ.ರಾವ್ (65) ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ. ಚಾಕುವಿನಿಂದ ಇರಿದ ಗಾಯದ ಗುರುತುಗಳಿರುವ ಸ್ಥಿತಿಯಲ್ಲಿ ಅವರ ಮೃತದೇಹ ನಗರದ ರೈಲು ಹಳಿ ಮೇಲೆ ಪತ್ತೆಯಾಗಿದೆ.

‘ಯಲಹಂಕ ಹಾಗೂ ರಾಜಾನುಕುಂಟೆ ನಿಲ್ದಾಣಗಳ ನಡುವಿನ ಹಳಿ ಮೇಲೆ ರಾವ್ ಮೃತದೇಹ ಪತ್ತೆಯಾಗಿತ್ತು. ದೇಹದ ಮೇಲೆ ಚಾಕುವಿನಿಂದ ಇರಿದ ಗುರುತುಗಳಿವೆ. ಕೊಲೆ ಶಂಕೆ ವ್ಯಕ್ತಪಡಿಸಿ ಅವರ ಕುಟುಂಬಸ್ಥರು ದೂರು ನೀಡಿದ್ದಾರೆ. ಅದರನ್ವಯ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ’ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ಬೆಂಗಳೂರಿನ ಕಾಲೇಜೊಂದರಲ್ಲಿ ಎಂಜಿನಿಯರಿಂಗ್ ಪದವಿ ಪೂರ್ಣಗೊಳಿಸಿದ್ದ ರಾವ್, ಬಾಂಬೆಯ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ (ಐಐಟಿ) ಪಿಎಚ್‌.ಡಿ ಪಡೆದಿದ್ದರು. ಹೈದರಾಬಾದ್‌ನ ಐಎಸ್‌ಬಿ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಬಳಿಕ ಹೈದಾರಾಬಾದ್‌ನಲ್ಲಿ ನೆಲೆಸಿದ್ದರು. ಉದ್ಯಮದಲ್ಲೂ ತೊಡಗಿಸಿಕೊಂಡಿದ್ದರು. ಆಗಾಗ ಬೆಂಗಳೂರಿಗೆ ಅವರು ಬಂದು ಹೋಗುತ್ತಿದ್ದರು. ಅವರ ಮಗಳು ಹರಿಣಿ, ತೆಲುಗು ಚಿತ್ರರಂಗದ ಗಾಯಕಿ’ ಎಂದೂ ತಿಳಿಸಿದರು.

ADVERTISEMENT

‘ಹೈದರಾಬಾದ್‌ನ ಮನೆಯಿಂದ ರಾವ್ ನಾಪತ್ತೆ ಆಗಿದ್ದರು. ಗಾಬರಿಗೊಂಡಿದ್ದ ಕುಟುಂಬಸ್ಥರು, ಸ್ಥಳೀಯ ಠಾಣೆಯಲ್ಲಿ ನಾಪತ್ತೆ ಬಗ್ಗೆ ದೂರು ನೀಡಿದ್ದರು. ಯಾರಿಗೂ ಹೇಳದೇ ನಗರಕ್ಕೆ ಬಂದಿದ್ದ ರಾವ್, ಹೋಟೆಲೊಂದರಲ್ಲಿ ನೆಲೆಸಿದ್ದರು ಎಂದು ಗೊತ್ತಾಗಿದೆ. ಇದರ ನಡುವೆಯೇ ನ. 23ರಂದು ಬೆಂಗಳೂರಿನಲ್ಲಿ ಹಳಿ ಮೇಲೆ ಅವರ ಮೃತದೇಹ ಪತ್ತೆಯಾಗಿದೆ’ ಎಂದೂ ವಿವರಿಸಿದರು.

ಹಣಕಾಸು ವ್ಯವಹಾರಕ್ಕಾಗಿ ಹಲವರ ಭೇಟಿ: ‘ಹಣಕಾಸು ವ್ಯವಹಾರದ ಸಂಬಂಧ ಬೆಂಗಳೂರಿನ ಹಲವರನ್ನು ರಾವ್ ಭೇಟಿ ಆಗುತ್ತಿದ್ದರು. ವ್ಯವಹಾರ ಸಂಬಂಧ ಹಲವರ ಜೊತೆ ವೈಷಮ್ಯ ಕಟ್ಟಿಕೊಂಡಿದ್ದ ಬಗ್ಗೆ ಶಂಕೆ ಇದೆ’ ಎಂದೂ ಅಧಿಕಾರಿ ಹೇಳಿದರು.

'ಸುದ್ದಗುಂಟೆಪಾಳ್ಯ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣವೊಂದರಲ್ಲಿ ರಾವ್ ಅವರೇ ಸಾಕ್ಷಿ ಆಗಿದ್ದರೆಂಬ ಮಾಹಿತಿ ಲಭ್ಯವಾಗಿದೆ. ಆ ಪ್ರಕರಣದ ಬಗ್ಗೆಯೂ ಮಾಹಿತಿ ಪಡೆಯುತ್ತಿದ್ದೇವೆ’ ಎಂದೂ ತಿಳಿಸಿದರು.

ಕೊಲೆಯೋ ಆತ್ಮಹತ್ಯೆಯೋ: ‘ಕತ್ತು ಹಾಗೂ ಕೈ ಮೇಲೆ ಚಾಕುವಿನಿಂದ ಇರಿದ ಗುರುತುಗಳಿವೆ. ಹೀಗಾಗಿ, ಅನುಮಾನಗೊಂಡಿರುವ ಕುಟುಂಬಸ್ಥರು ಕೊಲೆ ಶಂಕೆ ವ್ಯಕ್ತಪಡಿಸಿದ್ದಾರೆ. ಆದರೆ, ರಾವ್ ಅವರೇ ಚಾಕುವಿನಿಂದ ಚುಚ್ಚಿಕೊಂಡಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ಎರಡೂ ಆಯಾಮದಲ್ಲಿ ತನಿಖೆ ಮುಂದುವರಿಸಲಾಗಿದೆ’ ಎಂದೂ ಅಧಿಕಾರಿ ಹೇಳಿದರು.

‘ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಪರೀಕ್ಷೆ ವರದಿ ಬಂದ ನಂತರ ಕೆಲ ಸುಳಿವುಗಳು ಸಿಗಬಹುದು’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.