ADVERTISEMENT

₹ 3 ಲಕ್ಷ ಮೌಲ್ಯದ ಸ್ಫೋಟಕ ಜಪ್ತಿ; ಆರೋಪಿ ಬಂಧನ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2020, 17:16 IST
Last Updated 31 ಡಿಸೆಂಬರ್ 2020, 17:16 IST
ಜಪ್ತಿ ಮಾಡಲಾದ ಸ್ಫೋಟಕ ಜೊತೆ ಆರೋಪಿ
ಜಪ್ತಿ ಮಾಡಲಾದ ಸ್ಫೋಟಕ ಜೊತೆ ಆರೋಪಿ   

ಬೆಂಗಳೂರು: ಅಪಾಯಕಾರಿ ಸ್ಫೋಟಕಗಳನ್ನು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಆರೋಪದಡಿ ಶಿವಕುಮಾರ್ (35) ಎಂಬುವರನ್ನು ಆಂತರಿಕ ಭದ್ರತಾ ವಿಭಾಗದ (ಐಎಸ್‌ಡಿ) ಪೊಲೀಸರು ಬಂಧಿಸಿದ್ದಾರೆ.

‘ಚಿಂತಾಮಣಿ ತಾಲ್ಲೂಕಿನ ಕೈವಾರ ಬಳಿಯ ಸಂತೆಕಲ್ಲಹಳ್ಳಿ ನಿವಾಸಿಯಾದ ಶಿವಕುಮಾರ್, ಬೆಂಗಳೂರು ಕೆ.ಆರ್.ಪುರ ಬಳಿಯ ಭಟ್ಟರಹಳ್ಳಿ ಸಮೀಪದಲ್ಲಿ ನಿಂತುಕೊಂಡು ಸ್ಪೋಟಕ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಅವರನ್ನು ಸೆರೆ ಹಿಡಿಯಲಾಗಿದೆ’ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.

‘ಆರೋಪಿ ಬಳಿ ₹3 ಲಕ್ಷ ಮೌಲ್ಯದ ಸ್ಫೋಟಕ ಸಿಕ್ಕಿದೆ. ಹೆಚ್ಚಿನ ಹಣ ಸಂಪಾದನೆಗಾಗಿ ಆರೋಪಿ, ಅಕ್ರಮವಾಗಿ ಸ್ಫೋಟಕ ಮಾರುತ್ತಿದ್ದರು. ಕಲ್ಲು ಕ್ವಾರಿ ಹಾಗೂ ಗಣಿಗಾರಿಕೆ ನಡೆಸುತ್ತಿದ್ದ ಕೆಲವರು, ಇವರ ಬಳಿ ಸ್ಫೋಟಕ ಖರೀದಿ ಮಾಡುತ್ತಿದ್ದ ಮಾಹಿತಿ ಇದೆ. ಹಲವರು ಆರೋಪಿ ಬಳಿ ಸ್ಫೋಟಕ ಖರೀದಿದ್ದ ಸಂಗತಿ ಗೊತ್ತಾಗಿದೆ. ಅವರ ಉದ್ದೇಶವೇನು ಎಂಬುದು ತನಿಖೆಯಿಂದ ತಿಳಿಯಬೇಕಿದೆ’ ಎಂದೂ ಮೂಲಗಳು ಹೇಳಿವೆ.

ADVERTISEMENT

ಮನೆಯಲ್ಲೇ ಸ್ಫೋಟಕ ಸಂಗ್ರಹ: ‘ಭಟ್ಟರಹಳ್ಳಿ ಬಳಿ ಸಿಕ್ಕಿಬಿದ್ದಿದ್ದ ಆರೋಪಿ ಶಿವಕುಮಾರ್ ಬಳಿ 40 ಜೆಲಿಟಿನ್ ಕಡ್ಡಿ, 100 ಡಿಟೊನೇಟರ್ ಪತ್ತೆಯಾಗಿತ್ತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಮನೆಯಲ್ಲಿ ಸ್ಫೋಟಕ ಸಂಗ್ರಹಿಸಿರುವುದಾಗಿ ಆರೋಪಿ ಹೇಳಿದ್ದರು. ಮನೆಗೆ ಹೋಗಿ ನೋಡಿದಾಗ ಮತ್ತಷ್ಟು ಸ್ಫೋಟಕ ಲಭ್ಯವಾಯಿತು’ ಎಂದು ಐಎಸ್‌ಡಿ ಮೂಲಗಳು ತಿಳಿಸಿವೆ.

’25 ಚೀಲ ಅಮೋನಿಯಂ ನೈಟ್ರೇಟ್, 1,710 ಜೆಲಿಟಿನ್ ಕಡ್ಡಿಗಳು, 3,000 ಡಿಟೊನೇಟರ್, 150 ಸೇಫ್ಟಿ ಪ್ಯೂಸ್ ಮತ್ತು ಬ್ಲಾಕ್ ಪೌಡರ್ ಹಾಗೂ 50 ಸಣ್ಣ ಗಾತ್ರದ ತಂತಿಗಳು ಮನೆಯಲ್ಲಿ ಸಿಕ್ಕಿವೆ. ಸ್ಫೋಟಕಗಳ ಕಾಯ್ದೆಯಡಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದೂ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.