ADVERTISEMENT

ಜೈಲಿನಿಂದಲೇ ಕರೆ ಮಾಡಿ ಹಣ ವಸೂಲಿ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 21:30 IST
Last Updated 1 ಡಿಸೆಂಬರ್ 2020, 21:30 IST

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ವಿಚಾರಣಾಧೀನ ಕೈದಿಗಳಿಬ್ಬರು, ಜೈಲಿನಿಂದಲೇ ಕರೆ ಮಾಡಿ ಜನರನ್ನು ಬೆದರಿಸಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಕರಣ ದಾಖಲಾಗಿದೆ.

‘ಅಪರಾಧ ಪ್ರಕರಣವೊಂದರಲ್ಲಿ ಜೈಲು ಸೇರಿರುವ ಸಿದ್ದರಾಜು ಅಲಿಯಾಸ್ ಸಿದ್ದ ಹಾಗೂ ಮಧು ಅಲಿಯಾಸ್ ಸ್ಲಂ ಎಂಬುವರು, ಜೈಲಿನಿಂದಲೇ ಕರೆ ಮಾಡಿ ಹಣಕ್ಕಾಗಿ ಕೊಲೆ ಬೆದರಿಕೆ ಹಾಕುತ್ತಿದ್ದಾರೆ’ ಎಂದು ಆರೋಪಿಸಿ ವ್ಯಾಪಾರಿ ಶಂಕರ್ ಎಂಬುವರು ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ. ಸಿದ್ದರಾಜು ಹಾಗೂ ಮಧು ವಿರುದ್ಧ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡಿದ್ದಾರೆ.

‘ಜೈಲಿಗೆ ಹೋದ ದಿನದಿಂದಲೂ ಆರೋಪಿಗಳು, ತಮ್ಮ ಮೊಬೈಲ್‌ ಸಂಖ್ಯೆಯಿಂದ ಕರೆ ಮಾಡಿ ಹಣ ಕೇಳುತ್ತಿದ್ದರು. ಆರಂಭದಲ್ಲಿ ಅವರು ಹೇಳಿದ್ದ ಖಾತೆಗಳಿಗೆ ಹಣ ಜಮೆ ಮಾಡಿದ್ದೆ. ಇತ್ತೀಚೆಗೆ, ಪದೇ ಪದೇ ಹಣ ಕೇಳಲಾರಂಭಿಸಿದ್ದರು. ನನ್ನ ಬಳಿ ಹಣವಿಲ್ಲವೆಂದು ಹೇಳಿದ್ದೆ. ಅಷ್ಟಕ್ಕೆ ಆರೋಪಿಗಳು ಕೊಲೆ ಬೆದರಿಕೆಯೊಡ್ಡಿದ್ದಾರೆ’ ಎಂದೂ ಶಂಕರ್ ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

‘ನನ್ನ ಮೊಬೈಲ್‌ನಿಂದ ಸಲೂನ್‌ ಅಂಗಡಿಯೊಂದರ ಮಾಲೀಕರ ಜೊತೆಯೂ ಮಾತನಾಡಿದ್ದ ಆರೋಪಿಗಳು, ಅವರಿಗೂ ಹಣಕ್ಕಾಗಿ ಬೆದರಿಸಿದ್ದರು. ಹಣ ಕೊಡದಿದ್ದಕ್ಕೆ ತಮ್ಮ ಸಹಚರರನ್ನು ಅಂಗಡಿಗೆ ಕಳುಹಿಸಿ ಕೊಲೆ ಮಾಡಿಸುವುದಾಗಿ ಬೆದರಿಸಿದ್ದಾರೆ’ ಎಂದೂ ಶಂಕರ್ ದೂರಿದ್ದಾರೆ.

ಪೊಲೀಸರು, ‘ಜೈಲಿನಿಂದ ಆರೋಪಿಗಳು ಕರೆ ಮಾಡಿ ಬೆದರಿಸಿರುವುದು ತನಿಖೆಯಿಂದ ಗೊತ್ತಾಗಿದೆ. ಆರೋಪಿಗಳ ಕೈಗೆ ಮೊಬೈಲ್ ಸಿಕ್ಕಿದ್ದು ಹೇಗೆ ಎಂಬುದನ್ನು ತಿಳಿದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಜೈಲಿನ ಅಧಿಕಾರಿಗಳಿಂದ ಮಾಹಿತಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.